ಕಡಬ: ಪರವಾನಿಗೆ ಇಲ್ಲದೇ ಮರಳು ಸಾಗಾಟ ಪ್ರಕರಣವನ್ನು ಕಡಬ ಪೊಲೀಸರು ಕಳಾರ ಎಂಬಲ್ಲಿ ಪತ್ತೆ ಹಚ್ಚಿ ಸಾಗಾಟಕ್ಕೆ ಬಳಸುತ್ತಿದ್ದ ಪಿಕಪ್ ವಾಹನ ವಶಪಡಿಸಿಕೊಂಡ ಘಟನೆ ನಡೆದಿದೆ.
ಕಡಬ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅಭಿನಂದನ್ ಎಂ.ಎಸ್. ಹಾಗೂ ಸಿಬ್ಬಂದಿಗಳು ಮಂಗಳವಾರ ಸಂಜೆ ಕಡಬ ಗ್ರಾಮದ ಕಳಾರ ಎಂಬಲ್ಲಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡಬ ಕಡೆಗೆ ಬರುತ್ತಿದ್ದ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಮರಳು ಕಂಡು ಬಂದಿದೆ. ಈ ಬಗ್ಗೆ ಚಾಲಕ ಕುಂತೂರು ನಿವಾಸಿ ಸಾದಿಕ್ ಎಂಬವರನ್ನು ವಿಚಾರಿಸಿದಾಗ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕುಂತೂರು ನಿವಾಸಿ ಸುರೇಶ್ ಎಂಬವರ ಸಹಾಯದಿಂದ ಕುಂತೂರುಪದವು ಎಂಬಲ್ಲಿ ಹರಿಯುವ ನದಿಯಿಂದ ಮರಳನ್ನು ಅಕ್ರಮವಾಗಿ ತೆಗೆದು, ಮಾರಾಟಕ್ಕಾಗಿ ಸಾಗಿಸುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಪಿಕಪ್ ವಾಹನ ಮತ್ತು ಮರಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ದ ಅ.ಕ್ರ:1/2024 ಕಲಂ:379.34. ಐ.ಪಿ.ಸಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.