ಪುತ್ತೂರು: ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ವಿಚಾರದಲ್ಲಿ ಭಾರತವನ್ನು ಪ್ರತಿನಿಧಿಸಿದ ಅಪರೂಪದ ಯತಿಗಳಾದ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ ನಡೆಯಲಿದೆ ಎಂದು ಪೌರ ಸನ್ಮಾನ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 4ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪೌರ ಸನ್ಮಾನದ ಜೊತೆಗೆ ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ ಅವರು, ಶ್ರೀಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಧರ್ಮವನ್ನು ಗುರುತಿಸುವಂತೆ ಮಾಡಿದವರು ಎಂದು ವಿವರಿಸಿದರು.
ಜ. 4ರಂದು ಸಂಜೆ 4 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೌರ ಸನ್ಮಾನ ಸಮಿತಿ ಅಧ್ಯಕ್ಷ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿರುವರು. ವಿಶ್ರಾಂತ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಅವರು ಅಭಿನಂದನಾ ಭಾಷಣ ಮಾಡುವರು ಎಂದರು.
ಪುತ್ತಿಗೆ ಶ್ರೀಪಾದರಿಗೆ ಪೂರ್ಣಕುಂಭ ಸ್ವಾಗತ, ವಾದ್ಯ ಘೋಷದೊಂದಿಗೆ ಮೆರವಣಿಗೆ, ಶ್ರೀ ದೇವಳಕ್ಕೆ ಪ್ರದಕ್ಷಿಣೆ, ಶ್ರೀ ದೇವರ ದರ್ಶನ, ನಟರಾಜ ವೇದಿಕೆಗೆ ಪೂಜ್ಯ ಶ್ರೀದ್ವಯರ ಆಗಮನ, ಪೌರ ಸನ್ಮಾನ, ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ, ಶ್ರೀ ಸ್ವಾಮೀಜಿಯವರಿಂದ ಆಶೀರ್ವಚನ, ಮಂತ್ರಾಕ್ಷತೆ ಒಟ್ಟು ಕಾರ್ಯಕ್ರಮದ ರೂಪುರೇಷೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ, ಸಂಚಾಲಕರಾದ ಭಾಸ್ಕರ ಬಾರ್ಯ, ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ನಿಡ್ವಣ್ಣಾಯ ಉಪಸ್ಥಿತರಿದ್ದರು.