ಪುತ್ತೂರು: ಪುತ್ತೂರು ಹಾಗೂ ಉಪ್ಪಿನಂಗಡಿ ಹೋಬಳಿಯಲ್ಲಿ ಬಾಕಿಯಿರುವ ಅಕ್ರಮ-ಸಕ್ರಮ, 94ಸಿ, 94ಸಿಸಿ ಹಕ್ಕುಪತ್ರ ವಿತರಣೆಯನ್ನು ಪ್ರಾಮಾಣಿಕವಾಗಿ, ಭ್ರಷ್ಟಾಚಾರ ರಹಿತವಾಗಿ ಕಾನೂನಿನ ಚೌಕಟ್ಟಿನಲ್ಲಿ, ಸಂಬಂಧ ಪಟ್ಟ ಅಧಿಕಾರಿಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಫಲಾನುಭವಿಯ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಶಾಸಕರ ಕಚೇರಿ ಎದುರು ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ಹಾಗೂ ಉಪ್ಪಿನಂಗಡಿ ಹೋಬಳಿಯ ಅಕ್ರಮ-ಸಕ್ರಮ, 94ಸಿ ಹಾಗೂ 94ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಇಂದು ಸುಮಾರು 460 ಮಂದಿಗೆ ಹಕ್ಕುಪತ್ರ ವಿತರಣೆ ನಡೆದಿದೆ. ಮುಂದೆ ಉಪ್ಪಿನಂಗಡಿ-ವಿಟ್ಲ ಭಾಗದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗಾಗಿ 260 ಕಡತಗಳು ರೆಡಿಯಾಗಿದೆ ಎಂದು ತಿಳಿಸಿದರು.
ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಮಾತನಾಡಿ, ಪುತ್ತೂರಿನಲ್ಲಿ ಸರಕಾರದ ಯೋಜನೆ ಪ್ರತಿಯೊಬ್ಬ ಬಡ ಫಲಾನುಭವಿಗೆ ತಲುಪುವ ನಿಟ್ಟಿನಲ್ಲಿ ಪುತ್ತೂರಿನ ಪ್ರತಿ ಸರಕಾರಿ ಕಚೇರಿಯಲ್ಲಿ ನನ್ನ ವೈಯಕ್ತಿಕ ಮೊಬೈಲ್ ನಂಬರ್ ಅಳವಡಿಸುತ್ತೇನೆ. ಏನಾದರೂ ಸಮಸ್ಯೆ ಉಂಟಾದಲ್ಲಿ ನನಗೆ ಕರೆ ಮಾಡಬಹುದು ಎಂದು ತಿಳಿಸಿದ ಅವರು, ಸರಕಾರಿ ಕೆಲಸವನ್ನು ಎಲ್ಲರೊಂದಿಗೆ ಕೈಜೋಡಿಸಿ ಶ್ರಮ ಪಟ್ಟು ಮಾಡುತ್ತೇನೆ ಎಂದರು.
ವೇದಿಕೆಯಲ್ಲಿ ತಹಶೀಲ್ದಾರ್ ಶಿವಶಂಕರ್, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು. ಮಹಮ್ಮದ್ ಬಡಗನ್ನೂರು ಸ್ವಾಗತಿಸಿದರು. ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.