ನದಿಯಲ್ಲಿ ಈಜಲು ತೆರಳಿದ್ದ ಮೂವರು ಇಂಜಿನೀಯರಿಂಗ್ ವಿದ್ಯಾರ್ಥಿಗಳು ನೀರುಪಾಲಾಗದ ಘಟನೆ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದ ಬರಪೊಳೆಯ ಕೊಂಗಣ ನದಿಯಲ್ಲಿ ನಡೆದಿದೆ.
ರಷಿಕ್ ಕುಶಾಲಪ್ಪ (20), ಆಕಾಶ್ ಬಿದ್ದಪ್ಪ (20) ಹಾಗೂ ಸುದೀಶ್ ಅಯ್ಯಪ್ಪ (20) ನೀರುಪಾಲದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಕೊಡಗಿನ ಪೊನ್ನಂಪೇಟೆ ಸಿಇಟಿ ಕಾಲೇಜಿನಲ್ಲಿ 2ನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ಐವರ ತಂಡ ವೀಕೆಂಡ್ ಕಾರಣಕ್ಕೆ ಕೊಂಗಣ ನದಿಯಲ್ಲಿ ಈಜಲು ತೆರಳಿದ್ದು ಈ ವೇಳೆ ಘಟನೆ ಸಂಭವಿಸಿದೆ. ನೀರಿನ ಹರಿವು ಹೆಚ್ಚಿದ್ದರಿಂದ ಮೂವರು ಕೊಚ್ಚಿ ಹೋಗಿದ್ದು ಇಬ್ಬರು ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಪೊನ್ನಂಪೇಟೆ ಸಿಐಟಿ ಕಾಲೇಜ್ ನ ನಾಲ್ವರು ವಿದ್ಯಾರ್ಥಿಗಳು ಕಾಲೇಜ್ ನಿಂದ 5 ಕಿ.ಮೀ ದೂರದಲ್ಲಿರುವ ಬರಪೊಳೆಗೆ ತೆರಳಿದ್ದು, ಈ ಪೈಕಿ ಮೂವರು ನೀರಿಗೆ ಇಳಿದಿದ್ದರು ಎಂದು ಹೇಳಲಾಗಿದೆ.
ಈ ವೇಳೆ ನೀರಿನ ಆಳಕ್ಕೆ ಸಿಲುಕಿ ಮೂವರು ಕೂಡ ಮೃತಪಟ್ಟಿದ್ದಾರೆ. ಓರ್ವ ವಿದ್ಯಾರ್ಥಿ ಕಾಲು ನೋವಿನ ಕಾರಣದಿಂದ ನೀರಿಗೆ ಇಳಿಯದೆ ದಡದಲ್ಲಿ ಉಳಿದಿದ್ದಾನೆ. ಗೋಣಿಕೊಪ್ಪ ಠಾಣಾಧಿಕಾರಿ ಬಿ.ಎಸ್.ರೂಪಾದೇವಿ, ಪೊನ್ನಂಪೇಟೆ ಠಾಣಾಧಿಕಾರಿ ನವೀನ್, ಶ್ರೀಮಂಗಲ ಠಾಣಾಧಿಕಾರಿ ಶಿವಾನಂದ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.