ಕೋಲಾರದ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಲದ ಗುಂಡಿ ಸ್ವಚ್ಛತೆ ಹಾಗೂ ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಸ್ವಚ್ಛತೆ ಪ್ರಕರಣದ ಬಳಿಕ ಇದೀಗ ಶಿವಮೊಗ್ಗದಲ್ಲೂ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದ್ದು, ಭದ್ರಾವತಿಯ ನೇರಲೆಕೆರೆ ಶಾಲಾ ಮಕ್ಕಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಆಕ್ರೋಶಗೊಂಡ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇದೇ ಮಾದರಿಯ ಅಮಾನವೀಯ ಘಟನೆ ಕಳೆದವಾರ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಬಹಿರಂಗವಾಗಿದೆ.
ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶಂಕರಪ್ಪ ಹಾಗೂ ಇತರೆ ಶಿಕ್ಷಕರು ವಿದ್ಯಾರ್ಥಿಗಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ ಎನ್ನಲಾಗಿದ್ದು, ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಮುಖಂಡರು ಶಿವಮೊಗ್ಗದ ಎಸಿ ಸತ್ಯನಾರಾಯಣ ಅವರಿಗೆ ದೂರು ಸಲ್ಲಿಸಿದ್ದಾರೆ. ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿರುವ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘಟನೆ ಮುಖಂಡರು ಮತ್ತು ಪೋಷಕರು ಆಗ್ರಹಿಸಿದ್ದಾರೆ.
ತಿಂಗಳೊಂದರಲ್ಲೇ ಇದು ಮೂರನೇ ಘಟನೆ!
ಕಳೆದ ವಾರ ರಾಜ್ಯ ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಇದರಿಂದ ಆಕ್ರೋಶಗೊಂಡ ಪಾಲಕರು ಹಾಗೂ ಕಾರ್ಯಕರ್ತರು ನಗರದ ಅಂದ್ರಹಳ್ಳಿಯ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಅಂದ್ರಹಳ್ಳಿ ಪ್ರಕರಣದ ಕುರಿತು ಮಾತನಾಡಿದ್ದ ಮಧು ಬಂಗಾರಪ್ಪ, ‘ಅಮಾನವೀಯ’ ಎಂದು ಖಂಡಿಸಿದ್ದರು.
ಬೆಂಗಳೂರಿನಲ್ಲಿ ನಡೆದಿದ್ದ ಅಮಾನವೀಯ ಘಟನೆಯ ನಂತರ ಶಿಕ್ಷಣ ಇಲಾಖೆಯು ಶಾಲಾ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರಿಗಳ ಸಭೆ ನಡೆಸಿ, ಮಕ್ಕಳನ್ನು ಅಂತಹ ಕೆಲಸಕ್ಕೆ ಒತ್ತಾಯಿಸುವವರಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರು ಮತ್ತು ಶಿವಮೊಗ್ಗ ಘಟನೆಗಳ ಮೊದಲು, ಕೋಲಾರ ಜಿಲ್ಲೆಯ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಈಗಾಗಲೇ ಬಂಧಿಸಲಾಗಿದೆ. ನಾಲ್ವರು ಗುತ್ತಿಗೆ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.