ಪುತ್ತೂರು: ನಗರದ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ, ಗಣಹೋಮ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗ್ರಾಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಜ.6 ಶನಿವಾರ ನಡೆಯಲಿದೆ ಎಂದು ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನ ಸಮಿತಿ ಅಧ್ಯಕ್ಷ ತಾರನಾಥ ರೈ ಬಿ. ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆರಂಭದಲ್ಲಿ ದೈವಸ್ಥಾನ ದೈವಸ್ಥಾನ ಕೇವಲ ಅರ್ಧ ಸೆಂಟ್ಸ್ ಜಾಗ ಹೊಂದಿತ್ತು. ಪ್ರಸ್ತುತ ಭಕ್ತಾದಿಗಳ, ಸ್ಥಳೀಯರ ಸಹಕಾರದಿಂದ 84 ಸೆಂಟ್ಸ್ ಜಾಗ ಹೊಂದಿದೆ. ಶ್ರೀ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಬಾಕಿಯಿದ್ದು, ಈ ಕುರಿತು ಸಂಪನ್ಮೂಲ ಕ್ರೋಢೀಕರಣದ ಅವಶ್ಯಕತೆಯಿದೆ. ಭಕ್ತಾದಿಗಳ ಸಹಕಾರ ಕೋರಿದರು.
ಕಾರ್ಯಕ್ರಮದ ವಿವರ ನೀಡಿ, ಶುಕ್ರವಾರ ಸಂಜೆ ವರ್ಷಾವಧಿ ಉತ್ಸವಕ್ಕೆ ಪೂರ್ವಭಾವಿಯಾಗಿ ದೇವತಾ ಪ್ರಾರ್ಥನೆ, ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಡಿ.6 ಶನಿವಾರ ಬೆಳಿಗ್ಗೆ ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ನಾಗತಂಬಿಲ, ಪಂಚಾಮೃತಾಭಿಷೇಕ, ಶ್ರೀ ದೈವಗಳ ಕಲಶ ತಂಬಿಲ ಸೇವೆ, ಸಾಮೂಹಿಕ ಆಶ್ಲೇಷಬಲಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ ನಡೆದು ಅನ್ನಸಂತರ್ಪಣೆ ಜರಗಲಿದೆ ಎಂದು ತಿಳಿಸಿದರು.
ಸಂಜೆ ಶ್ರೀ ದೈವಗಳ ಭಂಡಾರ ತೆಗೆದು ಬಳಿಕ ಶ್ರೀ ಅಸರು ಮುಂಡ್ಯತ್ತಾಯ ದೈವ ಸಹಿತ ಗ್ರಾಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಸೂರಪ್ಪ ಗೌಡ, ಉಪಾಧ್ಯಕ್ಷ ಪ್ರಶಾಂತ್ ಪಾಂಗಳಾಯಿ, ಸದಸ್ಯರಾದ ಪಿ.ಎಸ್.ರಾಜಗೋಪಾಲ್, ಸುಪ್ರೀತ ಸುನಿಲ್ ಪಾಂಗಳಾಯಿ ಉಪಸ್ಥಿತರಿದ್ದರು.