ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ ಎಂಬಲ್ಲಿಗೆ ನಾವೂ ಬದಲಾಗಬೇಕು ಅನ್ನುವುದು ಆಶಯ
ಪ್ರಕೃತಿ ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಯಾವುದೂ ಹಿಂದಿನಂತೆ ಇರುವುದಿಲ್ಲ. ಬದಲಾವಣೆಯೇ ಜಗದ ನಿಯಮ ಎಂದು ಮತ್ತೆ ಮತ್ತೆ ಸಾಬೀತು ಆಗುತ್ತಾ ಹೋಗಿದೆ.
ಇವತ್ತು ಬೇಟೆಯಾಡುವ ಪ್ರಾಣಿ ನಾಳೆ ತಾನೇ ಬೇಟೆ ಆಗುತ್ತದೆ. ಇವತ್ತು ಅಧಿಕಾರ ಚಲಾಯಿಸುವ ಪ್ರಭುತ್ವ ನಾಳೆ ಬೀದಿಗೆ ಬಂದಿರುತ್ತದೆ. ಇವತ್ತು ಅಹಂಕಾರದಿಂದ ಮೇಲೆ ಏರಿದವನು ನಾಳೆ ಇಳಿಯುತ್ತಾನೆ ಅನ್ನುವುದೂ ಜಗತ್ತಿನ ನಿಯಮವೇ ಆಗಿದೆ. ಅಹಂಕಾರ ಎಲ್ಲಿಯೂ ಗೆದ್ದಿರುವ ಉದಾಹರಣೆ ಇಲ್ಲ. ತಲೆಗೆ ಹಾಕಿದ ನೀರು ಕಾಲಿನ ತನಕ ಬರಲು ಹೆಚ್ಚು ದಿನಗಳು ಬೇಕಾಗುವುದಿಲ್ಲ.
ಇಡೀ ಜಗತ್ತನ್ನು ತನ್ನ ಸಾಮ್ರಾಜ್ಯ ದಾಹದಿಂದ ಆಳಿದ ಸರ್ವಾಧಿಕಾರಿ ಹಿಟ್ಲರ್ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ. ಜಗತ್ತಿಗೆ ಹೈಡ್ರೊಜನ್ ಬಾಂಬ್ ಕೊಡುಗೆ ನೀಡಿದ ರಷ್ಯನ್ ವಿಜ್ಞಾನಿ ಸಖಾರೋವ್ ಕೂಡ ನೇಣಿಗೆ ಕೊರಳು ಒಡ್ಡಿದ. ಅಲೆಕ್ಸಾಂಡರ್ ಅಂತ್ಯವೂ ತುಂಬಾನೆ ದಾರುಣ ಆಗಿತ್ತು. ಅಂದು ಶಕ್ತಿಶಾಲಿ ಆಗಿ ಅಹಂಕಾರದಿಂದ ಮೆರೆಯುತ್ತಿದ್ದ ಅನೇಕ ದೇಶಗಳು ಇಂದು ಭಿಕ್ಷೆ ಬೇಡುವ ಸ್ಥಿತಿಗೆ ಬಂದಿವೆ.
‘ಮೈ ನಹೀ ತೂ ಹೈ’ ಎನ್ನುವ ಸೂಕ್ತಿಯೇ ಕೊನೆಯವರೆಗೂ ನಿಲ್ಲುವುದು.
ಜಗತ್ತನ್ನು ಗೆಲ್ಲುವುದು ಹೇಗೆ?
ಪ್ರೀತಿಯಿಂದ ಜಗತ್ತನ್ನು ಗೆಲ್ಲಲು ಹೊರಟ ಸಿದ್ಧಾರ್ಥ ಗೌತಮಬುದ್ಧ ಆಗುತ್ತಾನೆ. ತನ್ನ ಜ್ಞಾನದಿಂದ ಜಗತ್ತನ್ನು ಗೆಲ್ಲಲು ಹೊರಟವನು ಬಸವಣ್ಣ ಆಗುತ್ತಾನೆ. ಸೇವೆಯಿಂದ ಜಗತ್ತನ್ನು ಗೆಲ್ಲಲು ಹೊರಟವನು ಅಲ್ಲಮ ಆಗುತ್ತಾನೆ. ಭಾವನೆಯಿಂದ ಜಗತ್ತನ್ನು ಗೆಲ್ಲಲು ಹೊರಟವನು ಷರೀಫ ಆಗುತ್ತಾನೆ. ಮಾನವೀಯತೆಯಿಂದ ಜಗತ್ತನ್ನು ಗೆಲ್ಲಲು ಹೊರಟವನು ಅರವಿಂದ ಆಗುತ್ತಾನೆ. ಅಧ್ಯಾತ್ಮದಿಂದ ಜಗತ್ತನ್ನು ಗೆಲ್ಲಲು ಹೊರಟವನು ನರೇಂದ್ರ ಆಗುತ್ತಾನೆ. ಮುಗ್ಧತೆಯಿಂದ ಜಗತ್ತನ್ನು ಗೆಲ್ಲಲು ಹೊರಟವನು ಕಲಾಂ ಆಗುತ್ತಾನೆ. ಧೈರ್ಯದಿಂದ ಜಗತ್ತನ್ನು ಗೆಲ್ಲಲು ಹೊರಟವನು ಭಗತ್ ಆಗುತ್ತಾನೆ. ಪ್ರತಿಭೆಯಿಂದ ಜಗತ್ತನ್ನು ಗೆಲ್ಲಲು ಹೊರಟವನು ಟಾಗೋರ್ ಆಗುತ್ತಾನೆ. ಅಹಂಕಾರದಿಂದ ಜಗತ್ತನ್ನು ಗೆಲ್ಲಲು ಹೊರಟವನು ಸರ್ವನಾಶ ಆಗುತ್ತಾನೆ ಅನ್ನುವುದೇ ಈ ಸಂಕ್ರಾಂತಿಯ ಸಂದೇಶ.
ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು