ಕಡಬ: ಡಿ.26 ರಂದು ನಡೆಯಲಿರುವ ಕಡಬ ತಾಲೂಕು ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ, ನೂತನ ತಾಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಉದ್ಘಾಟನಾ ಸಮಾರಂಭದ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆ ಇಂದು ನಡೆಯಲಿದೆ.
ಈಗಾಗಲೇ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಸಿದ್ಧತೆಗಳು ನಡೆದಿದ್ದು, ಎಲ್ಲಾ ಗ್ರಾಮದ ಹೊರಕಾಣಿಕೆ ವಾಹನಗಳು ಇಂದು ಸಂಜೆ 3 ಗಂಟೆಗೆ ಕಡಬ ಶ್ರೀ ಗಣಪತಿ ದೇವಸ್ಥಾನಕ್ಕೆ ಬಂದು ಅಲ್ಲಿಂದ ಗಣ್ಯರ ಸಮ್ಮುಖದಲ್ಲಿ ಮೆರವಣಿಗೆ ಉದ್ಘಾಟನೆಗೊಂಡು ಚೆಂಡೆ, ವಾದ್ಯದೊಂದಿಗೆ ಶಿಲಾನ್ಯಾಸ ನಡೆಯುವ ಹೊಸಮಠವನ್ನು ಸಂಜೆ 4 ಕ್ಕೆ ತಲುಪುವುದು.
ಕಡಬ ತಾಲೂಕಿನ 42 ಗ್ರಾಮಗಳಲ್ಲಿ ಸುಮಾರು 18 ಸಾವಿರ ಒಕ್ಕಲಿಗ ಗೌಡ ಸಮುದಾಯದ ಕುಟುಂಗಳಿದ್ದು, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಎಲ್ಲರೂ ಜತೆಗೂಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನಿಡುತ್ತಿದ್ದಾರೆ.
ಕಡಬ ತಾಲೂಕು ರಚನೆಯಾದ ಬಳಿಕ ಸಂಘವನ್ನು ತಾಲೂಕು ಮಟ್ಟದಲ್ಲಿ ಪುನರ್ ರಚಿಸಿ, ಪದಗ್ರಹಣ, ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರಿ ಸಂಘವನ್ನು ಸ್ಥಾಪಿಸಿ ಉದ್ಘಾಟಿಸುವ ಮೂಲಕ ಒಂದು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡಲಿದೆ.
ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ನೀಡುವ ಮೂಲಕ ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಸಮುದಾಯ ಭವನದ ಎಲ್ಲಾ ವರ್ಗದ ಜನರಿಗೆ ಎಟುಕುವ ದರದಲ್ಲಿ 3 ದರ್ಜೆಯ ಸಮುದಾಯ ಭವನದ ಯೋಜನೆಯನ್ನ ರೂಪಿಸಲಾಗಿದೆ.
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರ ನೇತೃತ್ವದಲ್ಲಿ ತಾಲೂಕಿನ ಗೌಡ ಸಮುದಾಯದ ಪ್ರತೀ ಮನೆಗಳನ್ನು ಸಂಪರ್ಕಿಸಿ ಜಾಗೃತಿ ಮೂಡಿಸುವುದರೊಂದಿಗೆ ಬೈಲುವಾರು, ಗ್ರಾಮ, ತಾಲೂಕು ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಈಗಾಗಲೇ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಲಾಗಿದೆ.