ಪುತ್ತೂರು: ಸಂಘಟನೆ ಇಲ್ಲದಿದ್ದರೆ ಮನುಷ್ಯನ ಅಸ್ಥಿತ್ವವೇ ಇಲ್ಲ. ಈ ನಿಟ್ಟಿನಲ್ಲಿ ಸಮುದಾಯದವರು ಒಗ್ಗಟ್ಟಾಗಿ ಕಾರ್ಯ ಪ್ರವೃತ್ತರಾಗುವ ಮೂಲಕ ಧರ್ಮದ ಚೌಕಟ್ಟಿನಲ್ಲಿ ಸ್ವಧರ್ಮವನ್ನು ಉಳಿಸಿ, ಪರ ಧರ್ಮಕ್ಕೆ ಗೌರವ ಕೊಡುವ ಸಮುದಾಯ ನಮ್ಮದಾಗಬೇಕು ಎಂದು ಶ್ರೀ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ನುಡಿದರು.
ಅವರು ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ತಾಲೂಕು ಸಮಿತಿಗಳ ಪದಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪ್ರಸ್ತುತ ಒಕ್ಕಲಿಗ ಸಮುದಾಯ ಪರಂಪರೆಯುಳ್ಳ ಸಮುದಾಯ. ಜತೆಗೆ ಹಿರಿಮೆ, ಗರಿಮೆ, ಸಾಂಸ್ಕೃತಿಕ ನೆಲೆಗಟ್ಟಿದೆ. ಇಷ್ಟೆಲ್ಲ ಇದ್ದು, ದೃಢ ನಿಲುವನ್ನು ಕಾಣಬೇಕಾದ ಸಮುದಾಯ ಸಂಘಟನೆಯ ಕೊರತೆಯಿಂದ ಕವಲು ದಾರಿಯತ್ತ ಸಾಗುತ್ತಿರುವುದು ಖೇದಕರ. ಈ ನಿಟ್ಟಿನಲ್ಲಿ ಸಂಘಟನಾತ್ಮಕ ಹೋರಾಟ ಮನೋಭಾವವನ್ನು ಪ್ರತಿಯೊಬ್ಬ ಬೆಳೆಸಿಕೊಳ್ಳಬೇಕು. ಇದು ಹುಟ್ಟಿನಿಂದ ಬರಬೇಕು. ಇದಕ್ಕಾಗಿ ಪರಾವಲಂಬಿ ಬದುಕು ಬಿಟ್ಟು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಿ. ಕಿರಿಯರಿಗೆ, ಮಕ್ಕಳಿಗೆ ಯುವಕರಿಗೆ ಹಿರಿಯರು ತಿಳುವಳಿಕೆ ನೀಡಿ, ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ, ಸದಸ್ಯತ್ವ ಅಭಿಯಾನಗಳನ್ನು ನಡೆಸಿ ಸಮುದಾಯದ ಉಳಿವಿಗಾಗಿ ಪಠ ತೊಡಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಒಕ್ಕಲಿಗ ಸಮುದಾಯ ಕೃಷಿಯಿಂದ ತೊಡಗಿ ಪ್ರಜಾ ಪರಂಪರೆ ತನಕ ನಮ್ಮ ಐಡೆಂಟಿಟಿ ಉಳಿಸಕೊಳ್ಳಬೇಕಾದ ಅಗತ್ಯವಿದೆ. ಜತೆಗೆ ಇನ್ನಷ್ಟು ಸಾಧಕರನ್ನು ನಿರ್ಮಾಣ ಮಾಡುವ ಕೆಲಸ ಆಗಬೇಕಾಗಿದೆ. ಈ ಮೂಲಕ ಧರ್ಮಾಧಾರಿತ ಸಮುದಾಯ ಎನ್ನುವುದನ್ನು ತೋರಿಸಿಕೊಡುವ ಕೆಲಸ ಮಾಡಬೇಕಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಸಂಘ ಸಂಸ್ಥೆ ಹಾಗೂ ಸರಕಾರಕ್ಕೆ ವ್ಯತ್ಯಾಸ ಇಲ್ಲ. ಎರಡರಲ್ಲೂ ಸಾರ್ವಜನಿಕರು, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಒಕ್ಕಲಿಗ ಸಮುದಾಯ ಹಿರಿಯರ ಮಾರ್ಗದರ್ಶನೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಸಮುದಾಯದಿಂದ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವಂತಾಗಲಿ ಎಂದರು.
ಯುವ ಸಂಘ ಅಧ್ಯಕ್ಷ ನಾಗೇಶ್ ಕೆಡೆಂಜಿ ಮಾತನಾಡಿ, ನಾಯಕತ್ವ, ಸಂಘಟನೆಯನ್ನು ಹಿರಿಯರ ಮಾರ್ಗದರ್ಶನ, ಸ್ವಾಮೀಜಿಯವರ ಅನುಗ್ರಹದಿಂದ ಮಾರ್ಗದರ್ಶನದೊಂದಿಗೆ ಜವಾಬ್ದಾರಿಯುತವಾಗಿ ನಿಭಾಯಿಸಿದ ತೃಪ್ತಿ ಇದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಗೌರವಾಧ್ಯಕ್ಷದ ಚಿದಾನಂದ ಬೈಲಾಡಿ, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ.ಗೌಡ, ನಿಯೋಜಿತ ಅಧ್ಯಕ್ಷೆ ವಾರಿಜ ಬೆಳ್ಯಪ್ಪ ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ ಡಿ.ವಿ., ಸಂಘದ ನೂತನ ಅಧ್ಯಕ್ಷ ದಯಾನಂದ ಕೆ.ಎಸ್. ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಡೆದ ಪದಪ್ರದಾನ ಕಾರ್ಯಕ್ರಮದಲ್ಲಿ ಯುವ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ನಿಯೋಜಿತ ಅಧ್ಯಕ್ಷ ಅಮರನಾಥ ಗೌಡ ಅವರಿಗೆ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ನಿಯೋಜಿತ ಅಧ್ಯಕ್ಷ ರವಿ ಮುಂಗ್ಲಿಮನೆ, ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ ನಿಯೋಜಿತ ಅಧ್ಯಕ್ಷೆ ವಾರಿಜ ಬೆಳ್ಯಪ್ಪ ಗೌಡ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಈ ಭಾರಿ ಆರಂಭಗೊಳಿಸಿದ ಸಾಧಕ ಗೌಡ ಪ್ರಶಸ್ತಿಯನ್ನು ಹಿರಿಯ ವಿಭಾಗದಲ್ಲಿ ರಾಮಣ್ಣ ಗೌಡ, ಯುವ ವಿಭಾಗದಲ್ಲಿ ತ್ರಿಶೂಲ್ ಗೌಡ ಹಾಗೂ ಮಹಿಳಾ ವಿಭಾಗದಲ್ಲಿ ಲೀಲಾವತಿ ಬಂಟ್ವಾಳ ಅವರಿಗೆ ಸ್ವಾಮೀಜಿಯವರು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿಂದಿನ ಸಾಲಿನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಲಿಂಗಪ್ಪ ಗೌಡ, ಮಮತಾ ದಂಪತಿ ಸ್ವಾಮೀಜಿಯವರಿಗೆ ಗೌರವಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಡಬ ತಾಲೂಕು ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ ಡಿ.26 ರಂದು ಕಡಬದಲ್ಲಿ ನಡೆಯುವ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿದರು.
ಪ್ರತಿಜ್ಞಾ, ಕೃಪಾ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಸ್ವಾಗತಿಸಿದರು. ಪದಾಧಿಕಾರಿಗಳಾದ ವಸಂತ ವೀರಮಂಗಲ, ದಾಮೋದರ್ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಕೆ.ಎಸ್. ವಂದಿಸಿದರು. ಈ ಸಂದರ್ಭದಲ್ಲಿ ಮಹಿಳಯರಿಗಾಗಿ ಅದೃಷ್ಟ ಚೀಟಿ ಎತ್ತಿ 10 ಮಂದಿ ಆಯ್ಕೆಯಾದ ಮಹಿಳೆಯರಿಗೆ ಸ್ವಾಮೀಜಿಯವರು ಸೀರೆ ವಿತರಿಸಿದರು.
ಸಭಾ ಕಾರ್ಯಕ್ರಮದ ಮೊದಲು ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.