ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ನಿಷೇಧ ಭಾರೀ ಸದ್ದು ಗದ್ದಲಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಹಿಜಾಬ್ ನಿಷೇಧ ವಾಪಾಸ್ ಪಡೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಅದರಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಜಾಬ್ ನಿಷೇಧ ವಾಪಾಸು ಪಡೆಯಲಾಗುವುದು ಎಂದು ಹೇಳಿಕೆ ನೀಡಿದ್ದು, ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಗೆ ವಿಧಾನಸಭೆ ಚುನಾವಣೆಯಲ್ಲಿ ಹಿಜಾಬ್ ಪ್ರಮುಖ ಅಸ್ತ್ರವಾಗಿತ್ತು. ಹಿಜಾಬ್ ನಿಷೇಧದ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಕಡೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕ್ರೋಡಿಕರಣವಾಗಿದ್ದವು. ಈ ನಡುವೆ ನಾವು ಅಧಿಕಾರಕ್ಕೆ ಬಂದರೆ ಹಿಜಾಬ್ ನಿಷೇಧ ವಾಪಸ್ ಪಡೆದುಕೊಳ್ಳುತ್ತೇವೆ ಎಂದು ನಾಯಕರು ಹೇಳಿದ್ದರು.
ಬಿಜೆಪಿ ಅವಧಿಯಲ್ಲಿ ಹಿಜಾಬ್ ನಿಷೇಧದ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣವನ್ನು ತೊರೆದಿದ್ದರು. ಉಡುಪಿ ಜಿಲ್ಲೆಯಲ್ಲಿ ಆರಂಭವಾಗಿದ್ದ ಹಿಜಾಬ್ ಗಲಾಟೆ ರಾಜ್ಯಾಧ್ಯಂತ ವ್ಯಾಪಿಸಿತ್ತು. ಕಾಲೇಜು ಆವರಣಗಳಲ್ಲಿ ಪ್ರತಿಭಟನೆ ಹಾಗೂ ವಿದ್ಯಾರ್ಥಿಗಳ ನಡುವಿನ ಗಲಾಟೆಗೂ ಕಾರಣವಾಗಿತ್ತು.
ಈ ನಡುವೆ ರಾಜ್ಯ ಸರ್ಕಾರದ ತೀರ್ಮಾಣವನ್ನು ಹೈಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಆದರೆ ಈ ತೀರ್ಪಿನ ಬೆನ್ನಲ್ಲೇ ಹಲವು ವಿದ್ಯಾರ್ಥಿನಿಯರು ಕಾಲೇಜು ತೊರೆದಿದ್ದರು. ವಿದ್ಯಾರ್ಥಿಗಳ ನಡುವೆಯೂ ಇದು ಕಂದಕ ಸೃಷ್ಟಿಗೆ ಕಾರಣವಾಗಿತ್ತು.
ಇದೀಗ ಸಿಎಂ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧ ವಾಪಸ್ ಸೂಚನೆ ನೀಡಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು ಉಡುಪು ಆಹಾರ ಅವರವರ ಇಷ್ಟ ಎಂದು ಪ್ರತಿಪಾದನೆ ಮಾಡಿದ್ದಾರೆ.
ನೀವು ಬಯಸಿದ ಉಡುಪನ್ನು ಧರಿಸಿ, ನಿಮಗೆ ಬೇಕಾದನ್ನು ತಿನ್ನಿ, ನನಗೆ ಬೇಕನಿಸಿದ್ದನ್ನು ನಾನು ತಿನ್ನುವೆ. ಉಡುಪು ಆಹಾರ ಅವರರವ ಇಷ್ಟ ಎಂದು ಹೇಳಿದ್ದರು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಡೆಯ ಹಿಂದೆ ರಾಜಕೀಯ ಉದ್ದೇಶವೂ ಇದೆ ಎಂಬುದು ಸಾಬೀತು ಮಾಡಿದಂತಾಗಿದೆ. ಈ ಮೂಲಕ ಲೋಕಸಭೆ ಚುನಾವಣೆಗೆ ಹಿಜಾಬ್ ಕೂಡಾ ಒಂದು ಚುನಾವಣಾ ಅಸ್ತ್ರವಾಗಲಿದೆ.