ಪುತ್ತೂರು: ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾದವರ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಡಿ.27 ರಿಂದ 29 ರವರೆಗೆ 3 ದಿನಗಳ ನೋಂದಣಿ ಶಿಬಿರವನ್ನು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಪಂಗಳಲ್ಲಿ ಏರ್ಪಡಿಸಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಸಂಬಂಧಪಟ್ಟ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಯೋಜನೆ ವಂಚಿತರ ಮಾಹಿತಿ ಪಡೆದುಕೊಂಡು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿದೆ. ಇದರ ಹೊರತಾಗಿಯೂ ಇನ್ನೂ ಅನೇಕ ಕುಟುಂಬಗಳಿಗೆ ಆರಂಭದಿಂದಲೇ ಒಂದೇ ಒಂದು ಕಂತು ಗೃಹಲಕ್ಷ್ಮೀ ಹಣ ಬಂದಿಲ್ಲ. ಅಂಥವರು ಡಿ.27 ರಿಂದ 29ರ ವರೆಗೆ ತಮ್ಮ ವ್ಯಾಪ್ತಿಯ ಗ್ರಾಪಂ ಕಚೇರಿಗಳನ್ನು ಸಂಪರ್ಕಿಸಬೇಕು. ರೇಶನ್ ಕಾರ್ಡ್, ಆಧಾರ್ ಕಾರ್ಡ್, ಮೊಬೈಲ್ ಫೋನ್ ಇತ್ಯಾದಿಗಳೊಂದಿಗೆ ಬಂದು ಮರು ನೋಂದಣಿ ಮಾಡಿಕೊಳ್ಳಬೇಕು. ಗ್ರಾಪಂ ಸಿಬ್ಬಂದಿಗಳು ಸಹಕಾರ ನೀಡಲಿದ್ದಾರೆ. ಒಂದೇ ಒಂದು ಅರ್ಹ ಕುಟುಂಬಗಳು ಯೋಜನೆಯಿಂದ ವಂಚಿತರಾಗಬಾರದು ಎಂಬುದು ಸರಕಾರದ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.