ಪುತ್ತೂರು : ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಕಾಣಿಯೂರು ಶಾಖೆಯ ಉದ್ಘಾಟನಾ ಸಮಾರಂಭ ಡಿ.23 ಶನಿವಾರ ಬೆಳಿಗ್ಗೆ 10.30 ಕ್ಕೆ ಕಾಣಿಯೂರು ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಗೌರಿ ಹೆಚ್ ತಿಳಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಸಂಘ 1975 ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಿ ಪ್ರಸ್ತುತ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ತಾಲೂಕು ಸೀಮಿತವಾಗಿ ಕಾರ್ಯಾಚರಿಸುತ್ತಿದ್ದ ಸಂಸ್ಥೆಯ ಇದೀಗ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನ ಎಂಬಂತೆ ಕಾಣಿಯೂರಿನಲ್ಲಿ 5ನೇ ಶಾಖೆ ಆರಂಭ ಮಾಡಿದ್ದೇವೆ ಎಂದರು.
ಸದಸ್ಯರಿಗೆ ಬ್ಯಾಂಕಿಂಗ್ ವ್ಯವಸ್ಥೆ ಜತೆಗೆ ಜವುಳಿ, ಗ್ರಾಹಕ ಸಾಮಾಗ್ರಿಗಳ ಮಾರಾಟ, ವಿವಿಧ ಸಂಘ ಸಂಸ್ಥೆಗಳಿಗೆ, ಸರಕಾರಿ ಕಚೇರಿಗಳಿಗೆ ಸಾಮಾಗ್ರಿಗಳ ಸರಬರಾಜು, ನ್ಯಾಯಬೆಲೆ ಅಂಗಡಿ ಹೊಂದಿದ್ದು, ಇ-ಸ್ಟಾಂಪಿಂಗ್ ವ್ಯವಸ್ಥೆಯೂ ಇದೆ ಎಂದು ತಿಳಿಸಿದರು.
ಕಾಣಿಯೂರು ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಕಾರ ಧ್ವಜಾರೋಹಣ ಮಾಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಸಮಾರಂಭ ಉದ್ಘಾಟಿಸುವರು. ಸಂಘದ ಅಧ್ಯಕ್ಷೆ ಗೌರಿ ಎಚ್. ಅಧ್ಯಕ್ಷತೆ ವಹಿಸುವರು. ಶಾಖಾ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸುವರು. ಗಣಕೀಕೃತ ಬ್ಯಾಂಕಿಂಗ್‍ಗೆ ಮಾಜಿ ಶಾಸಕ ಸಂಜೀವ ಮಠಂದೂರು ಚಾಲನೆ ನೀಡುವರು. ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ನಿರಖು ಠೇವಣಿ ಬಿಡುಗಡೆ, ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ ಉಳಿತಾಯ ಖಾತೆಗೆ ಚಾಲನೆ, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್ ಮಾರಾಟ ವಿಭಾಗದ ಉದ್ಘಾಟನೆ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ಸಹಕಾರಿ ಜ್ಯೋತಿ ಸ್ವಸಹಾಯ ಸಂಘದ ಉದ್ಘಾಟನೆ ನೆರವೇರಿಸುವರು. ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಚಾರ್ವಾಕ ಕೃಷಿಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಆನಂದ ಮೇಲ್ಮನೆ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಉಮಾ ಡಿ.ಪ್ರಸನ್ನ, ನಿರ್ದೇಶಕರಾದ ಮೋಹಿನಿ ದಿವಾಕರ್, ಪ್ರೇಮಲತಾ ರಾವ್, ವತ್ಸಲಾ ರಾಜ್ಞಿ ಉಪಸ್ಥಿತರಿದ್ದರು.