ಪುತ್ತೂರು: ಪುತ್ತೂರು ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಾರಥ್ಯದಲ್ಲಿ ‘ಶ್ರೀನಿವಾಸ ಕಲ್ಯಾಣೋತ್ಸವ’, ‘ಸನಾತನ ಸಮಾಗಮ’ ಡಿ.24 ಹಾಗೂ 25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸ್ವಾಗತ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯುವ ಕಾರ್ಯಕ್ರಮ ಅಂತ್ಯಂತ ವೈಭವದಿಂದ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ ಎಂದರು.
ಶ್ರೀನಿವಾಸ ಕಾರ್ಯಕ್ರಮದಂದು ದ.ಕ., ಉಡುಪಿ ಉಭಯ ಜಿಲ್ಲೆಗಳ ಸುಮಾರು 18 ಮಂದಿ ಮಠಾಧೀಶರುಗಳ ದಿವ್ಯ ಉಪಸ್ಥಿತಿ ಇರಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಎರಡು ದಿನಗಳ ಕಾಲ ನಿರಂತರ ಅನ್ನದಾನ, ಫಲಹಾರ ಸೇವೆ ವ್ಯವಸ್ಥೆ ಮಾಡಲಾಗುವುದು.
ಡಿ.23 ರಂದು ಸಂಜೆ 5ಕ್ಕೆ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಡಿ.24 ರಂದು ಸಂಜೆ 4 ಗಂಟೆಗೆ ಬೊಳುವಾರು ವೃತ್ತದಲ್ಲಿ ಬೃಹತ್ ಶೋಭಾಯಾತ್ರೆ ಮೂಲಕ ಶ್ರೀ ದೇವರನ್ನು ಬರಮಾಡಿಕೊಳ್ಳುವುದು, ಸಂಜೆ 6 ಗಂಟೆಗೆ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಸ್ವಾಗತ, ಅಯೋಧ್ಯಾ ಮಂಟಪಕ್ಕೆ ಆಗಮನ, ಸಂಜೆ 7 ರಿಂದ ವೈದಿಕ ಕಾರ್ಯಕ್ರಮ, 8 ರಿಂದ ಸಾಂಸ್ಕೃತಿಕ ವೈಭವ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ ಎಂದು ವಿವರಿಸಿದರು.
ಡಿ.25 ರಂದು ಬೆಳಿಗ್ಗೆ 6.30 ಕ್ಕೆ ಸುಪ್ರಭಾತ ಪೂಜಾ ಸೇವೆ, 10 ರಿಂದ ಭಜನೋತ್ಸವ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4 ಕ್ಕೆ ‘ಸನಾತನ ಸಮಾಗಮ’, 6ಕ್ಕೆ ವೈಭವದ “ಶ್ರೀನಿವಾಸ ಕಲ್ಯಾಣೋತ್ಸವ’ ಜರಗಲಿದೆ. ರಾತ್ರಿ 9 ರಿಂದ ಸಾಂಸ್ಕೃತಿಕ ವೈಭವ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ಕಾರ್ಯಕ್ರಮದ ವಿಶೇಷತೆಯಾಗಿ ತಿರುಪತಿ ಕ್ಷೇತ್ರಕ್ಕೆ ಒಳ್ಳೆ ಮೆಣಸು ಸಹಿತ ಕಾಣಿಕೆ ಅರ್ಪಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರುಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಶ್ರೀ ಈಶ ವಿಠಲದಾಸ ಸ್ವಾಮೀಜಿ, ಶ್ರೀ ಮಹಾಬಲ ಸ್ವಾಮೀಜಿ, ಶ್ರೀ ರಾಜಗುರು ಯೋಗಿ ಶ್ರದ್ಧಾನಾಥ ಜೀ, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ, ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಶ್ರೀ ಕೃಷ್ಣ ಗುರೂಜಿ ದಿವ್ಯ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಡಾ.ಸುರೇಶ ಪುತ್ತೂರಾಯ, ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಸ್ವಯಂ ಸೇವಕ ಸಮಿತಿ ಅಧ್ಯಕ್ಷ ಅನಿಲ್ ತೆಂಕಿಲ, ಪ್ರಚಾರ ಸಮಿತಿ ಸಂಚಾಲಕ ನವೀನ್ ರೈ ಪಂಜಳ ಉಪಸ್ಥಿತರಿದ್ದರು.