ಪುತ್ತೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಹಿರೇಬಂಡಾಡಿ ಗ್ರಾಮ ಪಂಚಾಯಿತಿ, ಚಿಗುರೆಲೆ ಸಾಹಿತ್ಯ ಬಳಗದ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ “ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ” ಎಂಬ ಘೋಷ ವಾಕ್ಯದಲ್ಲಿ ನಡೆಯುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮವು ಈಗಾಗಲೇ 10 ಸರಣಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು,11ನೇ ಸರಣಿ ಕಾರ್ಯಕ್ರಮವು ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಡಿ.23 ಶನಿವಾರ ನಡೆಯಲಿದೆ.
ಯುವಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಸೂಕ್ತ ವೇದಿಕೆ ನೀಡುವ ಒದಗಿಸುವ ನಿಟ್ಟಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಕವಿಗೋಷ್ಠಿ, ಕಥಾ ಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಿರಿಯ ಸಾಹಿತಿ ಎಸ್ ಜಿ ಕೃಷ್ಣ ಅವರು ನೀಡಿದ ಸಲಹೆ ಮೇರೆಗೆ ಈ ಬಾರಿ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಸರ್ವಾಧ್ಯಕ್ಷರು ಹಾಗೂ ಸಮಾರೋಪ ಭಾಷಣವನ್ನು ಅಳವಡಿಸಲಾಗಿದೆ. ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪ್ರಿಯಾಂಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸಾಜಿದ ಸಮಾರೋಪ ಭಾಷಣ ಮಾಡಲಿದ್ದಾರೆ.
ಅಧ್ಯಕ್ಷರು ಹಾಗೂ ಅತಿಥಿ ಗಣ್ಯರನ್ನು ವಾದ್ಯ ಘೋಷದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರುವುದು, ಸಭಾಂಗಣವನ್ನು ಕನ್ನಡದ ಬಾವುಟ-ಕನ್ನಡ ತಳಿರು -ತೋರಣಗಳಿಂದ ಅಲಂಕರಿಸಲಾಗುವುದು. ಜೊತೆಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಗ್ರಾಮ ಸಾಹಿತ್ಯ ಸಂಭ್ರಮ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪ ಪಡೆದಿದೆ.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಗಣರಾಜ್ ಕುಂಬ್ಳೆ, ನಿವೃತ್ತ ಶಿಕ್ಷಕ ಉಮೇಶ್ ಗೌಡ, ಪಾಡ್ದನ ಕಲಾವಿದೆ ಕಲ್ಯಾಣಿ, ನಾಟಿ ವೈದ್ಯ ಕೃಷ್ಣಪ್ಪ ಕಜೆ, ಯಕ್ಷಗಾನ ಕಲಾವಿದ ಶೇಖರ ಕೊರಂಬಾಡಿ, ವಿಶಿಷ್ಟ ಕ್ರೀಡಾ ಸಾಧಕಿ ಮಾನ್ಯ ಈ ಆರು ಜನ ಸಾಧಕರನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅಭಿನಂದಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಶಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಡಿಒ ರವಿಚಂದ್ರ, ಗ್ರಾ ಪಂ ಉಪಾಧ್ಯಕ್ಷೆ ಶಾಂಭವಿ, ಹಿರಿಯ ಸಾಹಿತಿ ಗಣರಾಜ ಕುಂಬ್ಳೆ, ಸಿ.ಆರ್.ಪಿ ಮಹಮ್ಮದ್ ಅಶ್ರಫ್, ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಗ್ರಾಪಂ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.