ಮತ್ತೆ ದೇಶದಲ್ಲಿ ಕೋವಿಡ್-19 ಹೊಸ ತಳಿ ಆರ್ಭಟ ಶುರುವಿಟ್ಟುಕೊಂಡಿದ್ದು, ಮುಂಜಾಗ್ರತಾ ಕ್ರಮ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಸರಕಾರಕ್ಕೆ ಕೊರೊನಾ ನಿಯಂತ್ರಣಕ್ಕೆ ಸಲಹೆ ಸೂಚನೆಗಳನ್ನು ನೀಡಿದೆ. ಮುಂಬರುವ ಹಬ್ಬಗಳ ಬಗ್ಗೆ ನಿಗಾ ವಹಿಸುವ ಜತೆಗೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದೆ.
ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿಗಾ ವಹಿಸಬೇಕು, ನಿಯಮಿತವಾಗಿ ವೈರಲ್ ತರಹದ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಬೇಕು. ತೀವ್ರತರವಾದ ಉಸಿರಾಟದ ಕಾಯಿಲೆ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಬೇಕು. ರೋಗ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಮಾದರಿ ಪರೀಕ್ಷೆ ಮಾಡಬೇಕು, ಆಸ್ಪತ್ರೆಗಳು ಸುಸಜ್ಜಿತವಾಗಿರುವಂತೆ ನೋಡಿಕೊಳ್ಳಬೇಕು, ಐಎಲ್‌ಐ, ಸಾರಿ ಕೇಸ್‌ಗಳ ಮೇಲೆ ನಿಗಾ ವಹಿಸಬೇಕು, ಚಿಕಿತ್ಸೆಗೆ ಬೇಕಾದ ಮೂಲಸೌಕರ್ಯ ಕ್ರೋಢೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್‌ಟಿಪಿಸಿಆರ್, ಕ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಬೇಕು. ಆರ್‌ಟಿಪಿಸಿಆರ್ ಪಾಸಿಟಿವ್ ಆದರೆ ಜೆನೆಮಿಕ್ ಸೀಕ್ವೆನ್ಸ್‌ಗೆ ಸ್ಯಾಂಪಲ್ ಕಳಿಸಬೇಕು. ಕೊವಿಡ್ ರೂಲ್ಸ್‌ಗಳನ್ನ ಸ್ಥಳೀಯವಾಗಿ ಜಾರಿ ಮಾಡಲು ರಾಜ್ಯಗಳಿಗೆ ಜವಾಬ್ದಾರಿ ನೀಡಲಾಗಿದೆ.
ಭಾರತದ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,828 ಕ್ಕೆ ಏರಿಕೆಯಾಗಿದೆ. ಕೇರಳ ರಾಜ್ಯದಲ್ಲಿ ಇತ್ತೀಚೆಗೆ ಉಪತಳಿ ಪತ್ತೆಯಾಗಿದೆ.