ಪುತ್ತೂರು: ಜಗತ್ತು ಸ್ಪರ್ಧೆಯ ಮೇಲೆ ನಿಂತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಧಿ ನೀಡುವ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಬೆಳೆಸುವಂತಹ ಕಾರ್ಯವನ್ನು ಶ್ರೀ ರಾಮ್ ಫೈನಾನ್ಸ್ ಮಾಡುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‍ನ ಪುತ್ತೂರು ಶಾಖೆ ಆಶ್ರಯದಲ್ಲಿ ಪುತ್ತೂರು ಟೌನ್ ಬ್ಯಾಂಕ್ ಹಾಲ್‍ನಲ್ಲಿ ಶುಕ್ರವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಧಿ ವಿತರಿಸಿ ಮಾತನಾಡಿದರು.
ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಇಂದೇ ತೀರ್ಮಾನ ಮಾಡಬೇಕು. ಹಾಗಾದಾಗ ಮಾತ್ರ ಭವಿಷ್ಯವನ್ನು ಸುಭದ್ರವಾಗಿ ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಸ್ವಾವಲಂಭಿ, ಸ್ವಾಭಿಮಾನಿಗಳಾಗಿ ಬೆಳೆದಾಗ, ದೇಶವೂ ಸ್ವಾವಲಂಭಿ, ಸ್ವಾಭಿಮಾನಿ ದೇಶವಾಗಿ ಮೂಡಿಬರುತ್ತದೆ. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವ ಆತ್ಮನಿರ್ಭರ ಭಾರತ ರೂಪುಗೊಳ್ಳುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀರಾಮ್ ಫೈನಾನ್ಸ್ ವಿದ್ಯಾರ್ಥಿನಿಧಿಯನ್ನು ಸ್ಥಾಪಿಸಿ, ಅದರಲ್ಲಿ ವಿದ್ಯಾರ್ಥಿವೇತನ ನೀಡುತ್ತಿರುವುದು ಉತ್ತಮ ಕೆಲಸ. ವಿದ್ಯಾರ್ಥಿಗಳಿಗೆ ಬದುಕು ಕೊಡುವ ಇಂತಹ ಕಾರ್ಯಕ್ರಮಗಳಿಂದ, ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಶಾಸಕರು ಹೇಳಿದಂತೆ ಶ್ರೀರಾಮ್ ಫೈನಾನ್ಸ್ ಅಂದರೆ ವಾಹನ ಸಾಲ ನೀಡುವ ಸಂಸ್ಥೆ ಎನ್ನುವುದು ನಮಗೆಲ್ಲ ತಿಳಿದಿತ್ತು. ಇಂದು ವಿದ್ಯಾರ್ಥಿವೇತನ ನೀಡುವ ಮೂಲಕ ಶ್ರೀರಾಮನ ಆಶೀರ್ವಾದ ಪಡೆಯುವಂತಹ ಕೆಲಸ ಮಾಡುತ್ತಿದೆ. ಜನರಿಗೆ ಟೋಪಿ ಹಾಕಿ ಹೋಗಿರುವ ಅನೇಕ ಕಂಪೆನಿಗಳು ದೇಶಾದ್ಯಂತ ಕಾಣಸಿಗುತ್ತವೆ. ಅಂತಹವುಗಳ ನಡುವೆ ಇಂತಹ ಉತ್ತಮ ಕಾರ್ಯ ಮಾಡುವ ಶ್ರೀರಾಮ್ ಫೈನಾನ್ಸ್‍ನಂತಹ ಸಂಸ್ಥೆಗಳು ಆದರ್ಶವಾಗಿ ನಿಲ್ಲುತ್ತವೆ ಎಂದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಶ್ರೀರಾಮ್ ಫೈನಾನ್ಸ್ ದೇಶಾದ್ಯಂತ 25 ಕೋಟಿ ರೂ.ನಷ್ಟು ವಿದ್ಯಾರ್ಥಿವೇತನ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಅದರಲ್ಲಿ ಸುಮಾರು 10 ಲಕ್ಷ ರೂ.ವನ್ನು ಪುತ್ತೂರಿನ 297 ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಲಾಭದ ಹಣದಿಂದ ತಾವೇ ಉದ್ಧಾರವಾಗುವಂತಹ ಅನೇಕರನ್ನು ನಾವು ಸಮಾಜದಲ್ಲಿ ಕಾಣುತ್ತೇವೆ. ಅವರುಗಳ ನಡುವೆ ಸಮಾಜದ ಉನ್ನತಿಗಾಗಿ ಇಂತಹ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸಂಸ್ಥೆಗಳು ಅಭಿನಂದನೀಯ ಎಂದರು.
ಕಾರ್ಯಕ್ರಮವನ್ನು ಝೋನಲ್ ಬ್ಯುಸಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಉದ್ಘಾಟಿಸಿದರು. ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ., ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸಂಸ್ಥೆಯ ರೀಜನಲ್ ಕಲೆಕ್ಷನ್ ಹೆಡ್ ಪ್ರಮೋದ್ ಅಂಚನ್, ಆರ್‍ಬಿಎಚ್ ಮಹೇಶ್ ಕುಮಾರ್ ಸಿ.ಎಚ್. ಉಪಸ್ಥಿತರಿದ್ದರು.
ಸಂಸ್ಥೆಯ ರೀಜನಲ್ ಬ್ಯುಸಿನೆಸ್ ಹೆಡ್ ಚೇತನ್ ಅರಸ್ ಸ್ವಾಗತಿಸಿ, ಬ್ರಾಂಚ್ ಮ್ಯಾನೇಜರ್ ಜಯಪ್ರಕಾಶ್ ರೈ ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
9.45 ಸಾವಿರ ರೂ. ವಿದ್ಯಾರ್ಥಿವೇತನ:
ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮತ್ತು ಮಾಲಕರ 8ರಿಂದ 10ನೇ ತರಗತಿವರೆಗಿನ ಶೇ. 60ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 3000 ರೂ. ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 3500 ರೂ. ವಿದ್ಯಾರ್ಥಿವೇತನ ನೀಡಲಾಯಿತು. ಪುತ್ತೂರು ತಾಲೂಕಿನ 297 ವಿದ್ಯಾರ್ಥಿಗಳಿಗೆ 945000 ರೂ. ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.