ಪೆರ್ನಾಜೆ: ಪೆಟ್ಟು ತಿಂದ ಕಲ್ಲು ಹೇಗೆ ಸುಂದರ ವಿಗ್ರಹವಾಗುತ್ತದೋ ಹಾಗೆ ವಿದ್ಯಾರ್ಥಿಗಳನ್ನು ಎಳವೆಯಲ್ಲೇ ತಿದ್ದಿ ತೀಡಿ ರೂಪ ನೀಡುವ ಶಿಕ್ಷಕರು ಆದರ್ಶ ಗುರು ಎಂದು ಹಿರಿಯ ವಿದ್ಯಾರ್ಥಿ ಕುಮಾರ್ ಪೆರ್ನಾಜೆ ಹೇಳಿದರು.
ಅವರು ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ಹಾಗೂ ಪ್ರೌಢಶಾಲಾ ಸಾಂಸ್ಕೃತಿಕ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗಾಳಿ ನಮಗೆಷ್ಟು ಮುಖ್ಯವೋ ಗಾಳಿಮಾತು ಅಷ್ಟೇ ಅಪಾಯಕಾರಿ. ನಂಬಿಕೆ ಅನ್ನೋದು ಬೆಲೆಕಟ್ಟಲಾಗದ ಅಮೂಲ್ಯ ರತ್ನ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟಗುರಿ, ಒಳ್ಳೆಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಹಳೆವಿದ್ಯಾರ್ಥಿ ದೇವಣ್ಣ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ ಮತ್ತು ಸಮನವಾಗಿ ಸ್ವೀಕರಿಸಬೇಕು ಎಂದರು.
ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕೊಚ್ಚಿ ಕೃಷ್ಣಪ್ರಸಾದ್ ಅಧ್ಯಕ್ಷತೆ ವಹಿಸಿ, ಎಲ್ಲಾ ಚಟುವಟಿಕೆಯಲ್ಲೂ ಕಾರ್ಯಕ್ರಮವನ್ನು ಅಳವಡಿಸಿಕೊಂಡು ತಮ್ಮನ್ನು ಸಾಬೀತುಪಡಿಸಿ ಪ್ರತಿಭೆಯನ್ನು ಹೊರ ಹಾಕಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಆಡಳಿತ ಮಂಡಳಿ ನಿರ್ದೇಶಕ, ಸಂಸ್ಥೆಯ ಹಿರಿಯ ವಿದ್ಯಾರ್ಥಿ ಆಶ್ಲೇಷ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಮಂಟ್ಯಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಜಾತಾ ವಂದಿಸಿದರು. ಶಿಕ್ಷಕಿ ಚರೀಷ್ಮಾ ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.