ಪುತ್ತೂರು: ದ.ಕ.ಜಿಲ್ಲೆಯಲ್ಲಿ ಮರಳು ಕೊರತೆಯಿರುವ ಕುರಿತು ವರದಿಯಾಗುತ್ತಿದ್ದು, ಸಿಆರ್ ಝೆಡ್ ನ ಕಾನೂನು ತೊಡಕಿನಿಂದ ಮರಳುಗಾರಿಕೆ ನಿಂತಿದೆ. ಆದರೆ ನಾನ್ ಸಿಆರ್‍ಝೆಡ್ ನಿಂದ ದ.ಕ.ಜಿಲ್ಲೆಯಲ್ಲಿ ಮರಳಿನ ಕೊರತೆಯಿಲ್ಲ. ಸಾರ್ವಜನಿಕರಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ನಾನ್ ಸಿಆರ್ ಝೆಡ್ ಮರಳು ಗುತ್ತಿಗೆದಾರರ ಸಂಘದ ದ.ಕ.ಜಿಲ್ಲಾ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ನಾನ್ ಸಿಆರ್ ಝೆಡ್ ಮರಳು ಗುತ್ತಿಗೆದಾರರ ಸಂಘ ಕಾನೂನಾತ್ಮಕವಾಗಿ ಮರಳು ಮಾರಾಟ ಮಾಡುತ್ತಿದ್ದು, ಸರಕಾರಕ್ಕೆ ರಾಯಲ್ಟಿ ಪಾವತಿಸಿ ಮರಳು ವ್ಯಾಪಾರ ಮಾಡುತ್ತಿದೆ. ಆದರೆ ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿ ಕಾನೂನುಬಾಹಿರವಾಗಿ ಮರಳುಗಾರಿಕೆ ದಂಧೆ ಜಾಸ್ತಿ ನಡೆಯುತ್ತಿದ್ದು, ಅಧಿಕಾರಿಗಳು ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕೇ ಹೊರತು ಕಾನೂನಿನ ಚೌಕಟ್ಟಿನಲ್ಲಿ ಮರಳು ವ್ಯಾಪಾರ ಮಾಡುವ ನಾನ್ ಸಿಆರ್ ಝೆಡ್ ಮರಳು ಗುತ್ತಿಗೆದಾರರ ಸಂಘಕ್ಕೆ ಯಾವುದೇ ಕಿರುಕುಳ ನೀಡದೇ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು. ನಾವು ಕಾನೂನಾತ್ಮಕವಾಗಿ ವ್ಯಾಪಾರ ಮಾಡುವುದಕ್ಕೆ ಗಣಿ ಇಲಾಖೆಯಲ್ಲಿ ಮಾಹಿತಿ ಇದೆ. ನಮಗೆ ತೊಂದರೆ ಮಾಡಿದಲ್ಲಿ ನಾವು ಯಾವುದೇ ಹೋರಾಟಕ್ಕೆ ಸಿದ್ಧರಿದ್ದೇವೆ. ಕಾನೂನಾತ್ಮಕವಾಗಿ, ಪ್ರಾಮಾಣಿಕವಾಗಿ ಮರಳು ವ್ಯಾಪಾರ ಮಾಡುವವರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಲ್ಲಿ ವಿನಂತಿಸಿದರು.
ಈಗಾಗಲೇ ಸುಳ್ಯ, ಬಂಟ್ವಾಳ, ಪುತ್ತೂರು, ಮಂಗಳೂರು, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ನಾನ್ ಸಿಆರ್ ಝೆಡ್ ನ ಅಡಿಯಲ್ಲಿ ಹಲವಾರು ಬ್ಲಾಕ್‍ಗಳಿದ್ದು, ಸುಮಾರು ಒಂದು ಲಕ್ಷ ಮೆಟ್ರಿಕ್ ಟನ್ ಗೂ ಅಧಿಕ ಮರಳು ದಾಸ್ತಾನು ಇದೆ. ಈ ನಿಟ್ಟಿನಲ್ಲಿ ಮರಳು ಕೊರತೆ ಎಂದಿಗೂ ಬರಲಾರದು ಎಂದ ಅವರು, ಇನ್ನೂ 10 ಬ್ಲಾಕ್ ಗಳನ್ನು ತೆರೆಯುವ ಯೋಜನೆಯಿದ್ದು, ತಾಂತ್ರಿಕ ಸಮಸ್ಯೆಯಿಂದ ಮಾಡಲಾಗಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ, ಜತೆ ಕಾರ್ಯದರ್ಶಿ ಸುರೇಶ್ ಕಡಬ, ಸದಸ್ಯರಾದ ಸಂಜೀವ ಬೆಳ್ತಂಗಡಿ, ಮಹಮ್ಮದ್ ಝಕಾರಿಯಾ ಅಡ್ಡೂರ್ ಉಪಸ್ಥಿತರಿದ್ದರು.