ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತಿದ್ದ ನಾಯಕ
ಹೊಸದಿಲ್ಲಿ : ಒಂದು ಕಾಲದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತಿದ್ದ ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ನಿನ್ನೆ ರಾತ್ರಿ ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 75 ವಷವಾಗಿತ್ತು. ಶರದ್ ಅವರ ನಿಧನದ ಸುದ್ದಿಯನ್ನು ಪುತ್ರಿ ಖಚಿತಪಡಿಸಿದ್ದಾರೆ. ಬಿಹಾರದ ರಾಜಕೀಯದಲ್ಲಿ ನಿರ್ಣಾಯಕ ಶಕ್ತಿಯಾಗಿದ್ದ ಶರದ್ ಯಾದವ್ ಸಮಾಜವಾದಿ ರಾಜಕೀಯವನ್ನು ಜನರೆಡೆಗೆ ತಲುಪಿಸಿದವರಲ್ಲಿ ಒಬ್ಬರು.
ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ತಮ್ಮ ತಂದೆಯ ನಿಧನವನ್ನು ಟ್ವಿಟ್ಟರ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಶರದ್ ಯಾದವ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ನಿನ್ನೆ ರಾತ್ರಿ 10.19ಕ್ಕೆ ಕೊನೆಯುಸಿರೆಳೆದಿದ್ದಾರೆ.ಈ ಸಮಾಜವಾದಿ ನಾಯಕನ ಅಗಲಿಕೆಯಿಂದಾಗಿ ರಾಜಕೀಯ ಪಡಸಾಲೆಯಲ್ಲಿ ಶೋಕ ಆವರಿಸಿದೆ. ಶರದ್ ಯಾದವ್ ಅವರ ಅಗಲಿಕೆಯಿಂದ ನನಗೆ ಅತೀವ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಸಂಸದರಾಗಿ ಮತ್ತು ಸಚಿವರಾಗಿ ವಿಶಿಷ್ಟ ಗುರುತನ್ನು ಹೊಂದಿದ್ದರು. ಲೋಹಿಯಾ ಅವರ ವಿಚಾರಗಳಿಂದ ಅವರು ಹೆಚ್ಚು ಪ್ರೇರಿತರಾಗಿದ್ದರು. ನಾನು ಅವರೊಂದಿಗೆ ನಡೆಸಿದ ಪ್ರತಿಯೊಂದು ಸಂಭಾಷಣೆಯನ್ನು ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬಕ್ಕೆ ಸಂತಾಪ. ಓಂ ಶಾಂತಿ ಎಂದು ಬರೆದಿದ್ದಾರೆ.
1947ರಲ್ಲಿ ಮಧ್ಯಪ್ರದೇಶದ ಹೋಶಂಗಾಬಾದ್‌ನ ಹಳ್ಳಿಯಲ್ಲಿ ಜನಿಸಿ ಶರದ್ ಯಾದವ್ ಎಂಜಿನಿಯರಿಂಗ್ ಪದವೀಧರ.. ಡಾ. ರಾಮ್ ಮನೋಹರ್ ಲೋಹಿಯಾ ಅವರ ವಿಚಾರಗಳಿಂದ ಪ್ರೇರಿತರಾಗಿ ಯುವ ನಾಯಕರಾಗಿ ಅವರು ಅನೇಕ ಚಳವಳಿಗಳಲ್ಲಿ ಭಾಗವಹಿಸಿದರು. 1974ರಲ್ಲಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಅವರು ಮೊದಲು ಮಧ್ಯಪ್ರದೇಶದ ಜಬಲ್‌ಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.