ಮಧ್ಯಪ್ರದೇಶ: ತೀವ್ರ ಕುತೂಹಲ ಕೆರಳಿಸಿದ್ದ ಮಧ್ಯಪ್ರದೇಶ ಸಿಎಂ ಆಯ್ಕೆ ಕಗ್ಗಂಟು ಕೊನೆಗೂ ಬಗೆಹರಿದಿದೆ. ಸಿಎಂ ರೇಸ್‌ನಲ್ಲಿದ್ದ ಎಲ್ಲರನ್ನೂ ಹಿಂದಿಕ್ಕಿ ಮೋಹನ್ ಯಾದವ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಬಿಜೆಪಿ ಕೇಂದ್ರ ನಾಯಕರ ನೇತೃತ್ವದಲ್ಲಿ ಮಧ್ಯಪ್ರದೇಶ ಬಿಜೆಪಿ ಶಾಸಕಾಂಗ ಸಭೆ ನಡೆಯಿತು. ಸಭೆಯಲ್ಲಿ ವೀಕ್ಷಕರಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಭಾಗವಹಿಸಿದ್ದರು. ಸಭೆಯಲ್ಲಿ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಸಿಎಂ ರೇಸ್‌ನಲ್ಲಿ ಇದ್ದವರು ಯಾರು?
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥೀ ಯಾರು ಎನ್ನುವುದನ್ನು ಬಿಜೆಪಿ ಘೋಷಿಸಿರಲಿಲ್ಲ. ಆದರೂ ಹಲವು ಜನಪ್ರಿಯ ಯೋಜನೆಗಳ ಮೂಲಕ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತಂದ ಶಿವರಾಜ್ ಸಿಂಗ್ ಚೌಹಾಣ್ ಸಿಎಂ ಆಗುತ್ತಾರೆ ಎನ್ನಲಾಗಿತ್ತು. ಸದ್ಯ ಸಿಎಂ ಸ್ಥಾನಕ್ಕಾಗಿ ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಪಟೇಲ್, ಮಾಜಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಭಾರೀ ಪೈಪೋಟಿ ನಡೆಸಿದ್ದರು.
ಮಧ್ಯಪ್ರದೇಶ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಗೆದ್ದು ಬೀಗಿತ್ತು. 230 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 163 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಸಿಎಂ ಆಯ್ಕೆಯಲ್ಲಿ ಗೊಂದಲ ಮುಂದುವರೆದಿತ್ತು. ತೀವ್ರ ಚರ್ಚೆಯ ಬಳಿಕ ಚುನಾವಣಾ ಫಲಿತಾಂಶ ಪ್ರಕಟವಾಗಿ 7 ದಿನಗಳ ಬಳಿಕ ಇದೀಗ ಹೊಸ ಸಿಎಂ ಆಯ್ಕೆಯಾಗಿದೆ.