ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಲಕ್ಷ ದೀಪೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿದೆ.
ಡಿ.12 ಮಂಗಳವಾರ ಲಕ್ಷದೀಪೋತ್ಸವ ನಡೆಯಲಿದ್ದು, ಈಗಾಗಲೇ ಒಂದು ಸುತ್ತಿನ ಸ್ವಚ್ಛತಾ ಕಾರ್ಯ ನಡೆದಿದೆ. ಸ್ವಚ್ಛತೆಯ ಹಿನ್ನಲೆಯಲ್ಲಿ ಭಾನುವಾರ ಸಂಜೆಯಿಂದಲೇ ರಥಬೀದಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ಲಕ್ಷ ಬಿಲ್ವಾರ್ಚನೆ ಸೇವೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಕ್ತಾದಿಗಳಿಂದ ಭಜನಾ ಸೇವೆ, ಸಂಜೆ 6.30 ರಿಂದ ದೀಪ ಪ್ರಜ್ವಲನ, ರಂಗೋಲಿ, 7.30 ರ ಪೂಜೆ ಬಳಿಕ ಶ್ರೀ ದೇವರ ಬಲಿ ಹೊರಟು ಒಳಾಂಗಣ ಹಾಗೂ ಹೊರಾಂಗಣದಲ್ಲಿ ಉತ್ಸವ, ಬಳಿಕ ಕಟ್ಟೆಪೂಜೆ, ಚಂದ್ರಮಂಡಲ ಉತ್ಸವ, ಕೆರೆ ಆಯನ ಜರಗಲಿದೆ.
ಸಂಜೆ 6.30 ರಿಂದ ಮಹಾಲಿಂಗೇಶ್ವರ ದೇವರ ಎದುರಿನ ರಥಬೀದಿಯಲ್ಲಿ ಲಕ್ಷಾಂತರ ಹಣತೆಗಳಲ್ಲಿ ದೀಪಗಳು ಬೆಳಗಲಿವೆ. ಜತೆಗೆ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳಿಂದ ದೀಪ ನಮನ ಹಾಗೂ ಧಾರ್ಮಿಕ ಸತ್ಸಂಗವೂ ನಡೆಯಲಿದೆ.
ಸ್ವಚ್ಛತಾ ಕಾರ್ಯದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಕರಸೇವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.