ಶಬರಿಮಲೆಯ ಅರವಣ ಪಾಯಸ ಪ್ರಸಾದದಲ್ಲಿ ಕೀಟನಾಶಕ ಅಂಶ ಪತ್ತೆ

ಪ್ರಸಾದ ವಿತರಿಸದಂತೆ ಹೈಕೋರ್ಟ್‌ ಆದೇಶ

ಶಬರಿಮಲೆ : ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲದ ‘ಅರವಣ ಪ್ರಸಾದ’ದಲ್ಲಿ ಕೀಟನಾಶಕ ಅಂಶ ಪತ್ತೆಯಾದ ಬಳಿಕ ಅದರ ತಯಾರಿಕೆ ಹಾಗೂ ಮಾರಾಟಕ್ಕೆ ಕೇರಳ ಹೈಕೋರ್ಟ್ ಬುಧವಾರ ತಡೆ ನೀಡಿದೆ. ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೀಟನಾಶಕ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಸಾದವನ್ನು ಮಾರಾಟ ಮಾಡದಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ. ಇದರಿಂದ ಆರೂವರೆ ಕೋಟಿ ರೂ. ಮೌಲ್ಯದ ಅರವಣ ಪ್ರಸಾದ ವ್ಯರ್ಥ ಆಗಲಿದೆ.
ಪ್ರಸಾದ ತಯಾರಿಸಲು ಖರೀದಿಸುವ ಏಲಕ್ಕಿಯನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಅದರಲ್ಲಿ 14 ವಿವಿಧ ಮಾದರಿಯ ಕೀಟನಾಶಕ ಕಂಡುಬಂದಿತ್ತು. ಗುತ್ತಿಗೆ ಪಡೆಯಲು ವಿಫಲವಾಗಿದ್ದ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಈ ಪರೀಕ್ಷೆಗೆ ಆದೇಶಿಸಿತ್ತು.
ತಿರುಪತಿಯ ಲಡ್ಡು, ಪಳನಿಯ ಪಂಚಾಮೃತದಂದತೆಯೇ ಶಬರಿಮಲೆ ಕ್ಷೇತ್ರದ ಪ್ರಸಾದ ಅರಾವಣಂ ಪಾಯಸಂ ಪ್ರಸಾದ ಪ್ರಸಿದ್ಧವಾಗಿದೆ. ಶಬರಿಮಲೆ ಯಾತ್ರಗೈಯ್ಯುವರು ಕನಿಷ್ಠ ಒಂದು ಡಬ್ಬವಾದರೂ ಈ ಪ್ರಸಾದ ತಂಉ ಹಂಚುವುದು ವಾಡಿಕೆ. ಅಕ್ಕಿ, ಬೆಲ್ಲ ಹಾಗೂ ತುಪ್ಪ ಬಳಸಿ ಮಾಡುವ ಈ ಅರವಣಂ ಪಾಯಸಂ ಶಬರಿಮಲೆ ಕ್ಷೇತ್ರದ ವಿಶಿಷ್ಟ ಪ್ರಸಾದವಾಗಿ ಪ್ರಸಿದ್ಧಿ ಪಡೆದಿದೆ. ಆದರೆ ಇದೀಗ ಈ ಪ್ರಸಾದಕ್ಕೆ ಗುಣಮಟ್ಟದ ಏಲಕ್ಕಿ ಬಳಸಲಾಗುತ್ತಿಲ್ಲ ಎಂಬ ಅಪಖ್ಯಾತಿ ಅಂಟಿಕೊಂಡಿದೆ.
ಶಬರಿಮಲೆಯಲ್ಲಿ ಅರವಣ ಪ್ರಸಾದ ತಯಾರಿಕೆಗೆ ಕಡಿಮೆ ಗುಣಮಟ್ಟದ ಏಲಕ್ಕಿಯನ್ನು ಬಳಸಲಾಗುತ್ತಿದೆ ಎಂಬ ವರದಿ ಹೊರಬಿದ್ದ ಮೇಲೂ ಈ ನಿಟ್ಟಿನಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತ ಗೋಪನ್ ಹೇಳಿದ್ದರು. ಸದ್ಯದ ಆರೋಪ, ದೂರುಗಳ ಹಿಂದೆ ಗುತ್ತಿಗೆದಾರರ ನಡುವಿನ ಪೈಪೋಟಿ ಇರುವುದೇ ಕಾರಣ ಎಂದೂ ಅವರು ಹೇಳಿದ್ದರು. ಆದರೆ, ಇದೀಗ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಹೈಕೋರ್ಟ್, ಅರವಣ ಪ್ರಸಾದ ಮಾರಾಟಕ್ಕೆ ತಡೆ ನೀಡಿದೆ.
ಏಲಕ್ಕಿ ರಹಿತ ಅರವಣ
ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಇಂದಿನಿಂದ ಏಲಕ್ಕಿ ರಹಿತ ಪಾಯಸ ವಿತರಿಸಲಾಗುತ್ತಿದೆ. ಯಂತ್ರಗಳನ್ನು ಸ್ವಚ್ಛಗೊಳಿಸಿ ಏಲಕ್ಕಿ ಇಲ್ಲದೆ ‘ಪಾಯಸ’ ಮಾಡುತ್ತೇವೆ. ಗುರುವಾರದಿಂದ ನಾವು ಏಲಕ್ಕಿ ರಹಿತ ಪಾಯಸ ವಿತರಿಸುತ್ತೇವೆ ಮತ್ತು ಸಾವಯವ ಏಲಕ್ಕಿಯನ್ನು ಸಂಗ್ರಹಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ ಎಂದು ದೇವಸ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top