ಕಲಬುರಗಿಯಲ್ಲಿ ವಕೀಲ ಈರಣ್ಣ ಮರ್ಡರ್ ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಕರ್ನಾಟಕವನ್ನೇ ನಡುಗಿಸಿದ ಭೀಭತ್ಸ ಕೃತ್ಯ. ಈ ಕೃತ್ಯದ ಮತ್ತೊಂದು ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಖತರ್ನಾಕ್ ದಂಪತಿ ಪೊಲೀಸರ ಅತಿಥಿಗಳಾಗಿದ್ದಾರೆ.
ಕಲಬುರಗಿ ಮಾತ್ರವಲ್ಲದೆ ಇಡೀ ರಾಜ್ಯದ ಜನ ಬೆಚ್ಚಿ ಬೀಳಿಸಿದ ಘಟನೆ ಇದು. ಸ್ವಲ್ಪವೂ ಕರುಣೆ, ದಯೆ ಇರದ ಮನಸ್ಥಿತಿಗಳು ವಕೀಲನನ್ನು ಮನಸೋ ಇಚ್ಛೆ ಕತ್ತರಿಸಿ ಕೊಂದು ಹಾಕಿದ್ದಾರೆ. ಡಿ. 7ರಂದು ಕಲಬುರಗಿಯಲ್ಲಿ ನಡೆದಿದ್ದ ವಕೀಲ ಈರಣ್ಣಗೌಡನ ಹತ್ಯೆಗೆ ಜನ ಆತಂಕಕ್ಕೀಡಾಗಿದ್ದರು. ಏಕೆಂದರೆ ಅಷ್ಟು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆದರೆ ಈಗ ಆ ಭಯಾನಕ ಕೃತ್ಯದ ಸಿಸಿಟಿವಿ ದೃಶ್ಯಗಳು ಪತ್ತೆಯಾಗಿವೆ.
ಅಂದು ಬೆಳಗ್ಗೆ 10:45ಕ್ಕೆ ಅಪಾರ್ಟ್ಮೆಂಟ್‌ನಿಂದ ಬೈಕ್‌ನಲ್ಲಿ ಈರಣ್ಣಗೌಡ ಹೊರಟಿದ್ದರು. ಈ ಸಮಯಕ್ಕೇ ಕಾದು ಕುಳಿತಿದ್ದ ಅವ್ವಣ್ಣ ನಾಯ್ಕೋಡಿ, ಮಲ್ಲಿನಾಥ್ ನಾಯ್ಕೋಡಿ ಮತ್ತು ಭಾಗೇಶ್ ನಾಯ್ಕೋಡಿ ಮಾರಕಾಸ್ತ್ರಗಳ ಸಮೇತ ಅಡ್ಡಗಟ್ಟಿದ್ದಾರೆ. ತಕ್ಷಣ ಅವರಿಂದ ಬಚಾವಾಗಲು ಅಪಾರ್ಟ್ಮೆಂಟ್ ಪಾರ್ಕಿಂಗ್‌ಗೆ ಓಡಿ ಬಂದಿದ್ದಾರೆ. ಈರಣ್ಣಗೌಡ ರಿವಾಲ್ವರ್ ತೆಗೆಯುವ ವೇಳೆಗೆ ಹಂತಕರು ಸೇರಿಕೊಂಡು ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ. 3 ನಿಮಿಷಗಳ ಕಾಲ 30ಕ್ಕೂ ಹೆಚ್ಚುಬಾರಿ ಈರಣ್ಣ ಗೌಡರನ್ನು ಕೊಚ್ಚಿ ಕೊಚ್ಚಿ ಕೊಂದಿದ್ದಾರೆ.
ಹತ್ಯೆಯ ಮಾಸ್ಟರ್ ಮೈಂಡ್ ದಂಪತಿ ಅರೆಸ್ಟ್
ಈರಣ್ಣಗೌಡ ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಮೊನ್ನೆ ಅವ್ವಣ್ಣ, ಭಾಗೇಶ್, ಮಲ್ಲಿನಾಥ್ ಸೇರಿದಂತೆ ಮೂವರನ್ನು ಬಂಧಿಸಿದ್ದ ಪೊಲೀಸರು, ಇದೀಗ ಈ ಹತ್ಯೆಗೆ ರೂಪುರೇಷೆ ಸಿದ್ದಪಡಿಸಿದ್ದ ಮಾಸ್ಟರ್ ಮೈಂಡ್ ನೀಲಕಂಠ ರಾವ್ ಪಾಟೀಲ್ ಮತ್ತು ಆತನ ಪತ್ನಿ ಸಿದ್ದಮ್ಮ ಪಾಟೀಲ್‌ರನ್ನ ಪೊಲೀಸರು ತಡರಾತ್ರಿ ಅರೆಸ್ಟ್ ಮಾಡಿದಾರೆ.
ಈರಣ್ಣ ಗೌಡರನ್ನು ಕೊಲೆ ಮಾಡಿ ಮಾಹಿತಿ ನೀಡಿದರು
ಕಳೆದ ನಾಲ್ಕು ದಿನ ಮುಂಚಿತವಾಗಿ ಈರಣ್ಣಗೌಡರನ್ನ ಹತ್ಯೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ ನೀಲಕಂಠ ರಾವ್ ಪತ್ನಿ ಸಿದ್ದಮ್ಮಳು ಮಲ್ಲಿನಾಥ್‌ಗೆ 50 ಸಾವಿರ ರೂಪಾಯಿ ಹಣ ನೀಡುವುದಾಗಿ ಹೇಳಿದ್ದಳು. ಅಲ್ಲದೇ ಹತ್ಯೆಯಾದ ದಿನ ಅಂದರೆ ಡಿಸೆಂಬರ್ 7ರಂದು ತಾವು ಖರೀದಿಸಿದ್ದ ಹೊಸ ಕಾರಿನ ಪೂಜೆ ಮಾಡಲು ನೀಲಕಂಠರಾವ್ ಪಾಟೀಲ್ ದಂಪತಿ ದೇವಲಗಾಣಗಾಪುರದ ದತ್ತನ ಸನ್ನಿಧಿಗೆ ತೆರಳಿದ್ದರು. ದತ್ತನ ಸನ್ನಿಧಿಯಲ್ಲಿ ಪೂಜೆ ಮುಗಿಸಿದ್ದ ತಕ್ಷಣ ಇತ್ತ ಮಲ್ಲಿನಾಥ್‌ನು ನೀಲಕಂಠರಾವ್‌ಗೆ ಕಾಲ್ ಮಾಡಿ ಈರಣ್ಣ ಗೌಡನನ್ನ ಮುಗಿಸಿರೋದಾಗಿ ಮಾಹಿತಿ ನೀಡಿದ್ದಾರೆ.
ಹತ್ಯೆಗೆ ಪ್ರತಿಯಾಗಿ 50 ಸಾವಿರ ರೂಪಾಯಿ
ಈರಣ್ಣಗೌಡ ಹತ್ಯೆ ಸುದ್ದಿ ಕಿವಿಗೆ ಬಂದು ಅಪ್ಪಳಿಸುತ್ತಲೇ ಸಂತಸಪಟ್ಟ ನೀಲಕಂಠರಾವ್ ದಂಪತಿ, ಬಳಿಕ ಕಲಬುರಗಿಗೆ ಆಗಮಿಸಿದ್ದಾರೆ. ನಂತರ ನೀಲಕಂಠರಾವ್ ಮನೆಗೆ ರಕ್ತದ ಕಲೆಯಲ್ಲೇ ಬಂದ ಹಂತಕ ಮಲ್ಲಿನಾಥ್ ನಾಯ್ಕೋಡಿ, ಈರಣ್ಣಗೌಡ ಹತ್ಯೆಗೆ ಪ್ರತಿಯಾಗಿ 50 ಸಾವಿರ ರೂಪಾಯಿ ಪಡೆದುಕೊಂಡು ಹೋಗಿದ್ದಾನೆ. ಹೀಗಾಗಿ ವಕೀಲನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿವಿ ಠಾಣೆ ಪೊಲೀಸರು ನೀಲಕಂಠರಾವ್ ಮತ್ತು ಸಿದ್ದಮ್ಮಳನ್ನ ಬಂಧಿಸಿದ್ದಾರೆ.
ಅದೆನೇ ಇರಲಿ, ಈಗಾಗಲೇ ಐವರು ನರಹಂತಕರನ್ನ ಬಂಧಿಸಿರುವ ಖಾಕಿಪಡೆ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.