ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ನಾಲ್ಕು ಮಂದಿಯನ್ನು ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಾಕಿನ ಸೈಬರ್ ಅಪರಾಧ ಜಾಲದೊಂದಿಗೆ ನಂಟು ಹೊಂದಿದ್ದ ಬಂಧಿತರು ಜಾರ್ಖಂಡಿನ ರಾಜಧಾನಿ ರಾಂಚಿಯಿಂದ 105 ಕಿ.ಮೀ ದೂರದಲ್ಲಿರುವ ಕೊರ್ರಾ ಪ್ರದೇಶದಲ್ಲಿ ಸೆರೆಯಾಗಿದ್ದಾರೆ.
ಈ ಗುಂಪು ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬರಿಗೆ ₹ 1.63 ಲಕ್ಷ ವಂಚಿಸಿತ್ತು. ಆದರೆ, ಅದಕ್ಕಾಗಿ ಬಳಸಿದ್ದ ಮೊಬೈಲ್ ಸಂಖ್ಯೆಯು ಜಾರ್ಖಂಡ್ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿತ್ತು. ಕಾರ್ಯಾಚರಣೆ ನಡೆಸಿದ ತನಿಖಾ ತಂಡ, ಬಂಧಿತರಿಂದ ಒಂದು ಕಾರು, ಎರಡು ದ್ವಿಚಕ್ರ ವಾಹನ, 10 ಮೊಬೈಲ್ ಫೋನ್‌ಗಳು, 36 ಸಿಮ್ ಕಾರ್ಡ್‌ಗಳು, 37 ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳು, 12 ಪಾಸ್ ಪುಸ್ತಕ ಮತ್ತು ಚೆಕ್ ಪುಸ್ತಕಗಳನ್ನು ವಶಕ್ಕೆ ಪಡೆದಿದೆ.
ವಿಚಾರಣೆ ವೇಳೆ ಅವರೆಲ್ಲ ಪಾಕಿಸ್ತಾನ ಮೂಲದ ವ್ಯಕ್ತಿಯ ನಿರ್ದೇಶನದಂತೆ ಕಾರ್ಯಾಚರಣೆ ನಡೆಸುತ್ತಿದ್ದುದಾಗಿ ಹೇಳಿಕೆ ನೀಡಿದ್ದಾರೆ ಎಂದು ಹಝಾರಿಬಾಗ್ ಎಸ್‌ಪಿ ಮನೋಜ್ ರತನ್ ಚೋತೆ ತಿಳಿಸಿದ್ದಾರೆ. ‘ಇದು ಗಂಭೀರ ಪ್ರಕರಣವಾಗಿದೆ. ವಂಚನೆ ಮೂಲಕ ಗಳಿಸಿದ ಹಣವನ್ನು ಸೈಬರ್ ಅಪರಾಧಗಳಿಗೆ ಅಥವಾ ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೃತ್ಯಗಳಿಗೆ ಬಳಸುವ ಯೋಜನೆಗಳೇನಾದರೂ ಇವೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಎಸ್.ಪಿ. ತಿಳಿಸಿದ್ದಾರೆ.