ಹೆತ್ತೂರು: ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ. ಅರ್ಜನನ ಕಾಲಿಗೆ ಕೂಳೆ ಚುಚ್ಚಿ ಗಾಯ ಆಗಿತ್ತು. ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಿವಳಿಕೆ ತಜ್ಞ ಡಾ. ರಮೇಶ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಯಾರ ಬಳಿಯೂ ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರಲ್ ಚರ್‍ರೆ ಕೋವಿ ಮಾತ್ರ. ಅದರಲ್ಲಿ ಹಾರಿದ ಚರ್‍ರೆಯಿಂದ ಆನೆ ಸಾಯುವುದಿಲ್ಲ. ಕಾಡಾನೆ ಹೆದರಿಸಲು ಮಾತ್ರ ಇದನ್ನು ಬಳಸುತ್ತೇವೆ ಎಂದು ವಿವರಿಸಿದ ಅವರು, ಅರ್ಜನನ ಕಾಲಿಗೆ ಕೂಳೆ ಚುಚ್ಚಿ ಗಾಯ ಆಗಿತ್ತು. ಅದನ್ನು ಮಾವುತ ವಿನು ಅಲ್ಲಿಯೇ ಗಮನಿಸಿದ್ದಾನೆ ಎಂದರು.
‘ಕಾರ್ಯಾಚರಣೆಯಂದು ನಾನು, ಅರ್ಜುನನ ಮಾವುತ ವಿನು, ಭೀಮ ಆನೆಯ ಮಾವುತ ಗುಂಡ ಅರ್ಜುನನ ಮೇಲೆ ಇದ್ದೆವು. ಪ್ರಶಾಂತ್ ಮೇಲೆ ಕೊಡಗಿನ ಡಿಆರ್‌ಎಫ್‌ಒ ರಂಜನ್ ಇದ್ದರು. ನಮಗೆ ವಿಕ್ರಾಂತ್ ಹೆಸರಿನ ಒಂದು ಹಾಗೂ ಮತ್ತೊಂದು ಸಲಗ ಸೇರಿ ಎರಡು ಆನೆಗಳ ಸೆರೆಗೆ ಗುರಿ ನಿಗದಿಯಾಗಿತ್ತು’ ಎಂದು ತಿಳಿಸಿದರು.