ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ 12 ಸ್ಥಾನಗಳಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಒಟ್ಟು 24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು.
ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದಾಗ 9 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮತ್ತು 3 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಬೆಂಬಲಿತರ ತೆಕ್ಕೆಯಲ್ಲಿದ್ದ ಆಡಳಿತ ಮಂಡಳಿ ಅಧಿಕಾರ ಇದೀಗ ಬಿಜೆಪಿ ಬೆಂಬಲಿತರ ಪಾಲಾಗಿದೆ.
ಮರು ಎಣಿಕೆ:
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಶಾಲಪ್ಪ ಗೌಡ ಅವರು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ದೇವಪ್ಪ ಅವರ ವಿರುದ್ಧ ಕೇವಲ 5 ಮತಗಳ ಅಂತರದಿಂದ ಗೆದ್ದ ನಂತರ, ಬಿಜೆಪಿ ಬೆಂಬಲಿತರ ಮನವಿಯ ಮೇರೆಗೆ ಅದರ ಮರು ಎಣಿಕೆ ನಡೆಯಿತು. ಮರು ಎಣಿಕೆಯಲ್ಲಿ ದೇವಪ್ಪ ಅವರು 4 ಮತಗಳನ್ನು ಪಡೆದುಕೊಂಡರು. ಒಟ್ಟಿನಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 10 ಅಭ್ಯರ್ಥಿಗಳು ಹಾಗೂ 2 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದರು.
ಚುನಾವಣಾ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠದೂರು, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟು, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಕೃಷ್ಣ ಕುಮಾರ್, ಹಿಂದೂ ಮುಖಂಡ ಮುರಳಿಕೃಷ್ಣ ಭಟ್ ಹಸಂತಡ್ಕ, ಸಂತೋಷ್ ಕೈಕಾರ, ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನರಿಮೊಗರು ಗ್ರಾಪಂನ ಹರಿಣಿ ಪಂಜಳ, ಗ್ರಾಪಂ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ನಿಕಟಪೂರ್ವ ಉಪಾಧ್ಯಕ್ಷ ಸುಧಾಕರ್ ಕುಲಾಲ್, ಬಿಜೆಪಿ ಮುಖಂಡರಾದ ಪುರುಷೋತ್ತಮ ಮುಂಗ್ಲಿಮನೆ, ನಿತೇಶ್ ಶಾಂತಿವನ, ಹರಿಶ್ ಬಿಜತ್ರೆ, ಹರಿಪ್ರಸಾದ್ ಯಾದವ್, ದಿನೇಶ್ ಪಂಜಿಗ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್ ಕರ್ಪುತ್ತಮೂಲೆ, ಶ್ಯಾಮ್ ಭಟ್ ಶಾಂತಿಗೋಡು, ನವೀನ್ ರೈ ಶಿಬರ ಮತ್ತಿತರರು ಉಪಸ್ಥಿತರಿದ್ದರು.