ಮನೆಯಂಗಳಕ್ಕೆ ಪ್ರವೇಶಿಸಿದ ನಾಲ್ಕೈದು ಮಂದಿಯ ಗುಂಪು ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೀಟರ್ ಬಡ್ಡಿ ವಸೂಲಿಗಾರ ಸುಮಿತ್ ಆಳ್ವ ಅಲಿಯಾಸ್ ಸುಮ್ಮಿ, ಮಹಮ್ಮದ್ ಜುನೈದ್, ಸೀಯಾನ್ ಮತ್ತು ಮಹಮ್ಮದ್ ತೌಫೀಕ್ ನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಗೇಟ್ ಮುರಿದು ಮುಂಬಾಗಿಲಿಗೆ ಬೆಂಕಿ
ಮಂಗಳೂರು ತಾಲೂಕು ಬಳ್ಳಾಲಭಾಗ್ ಶಿರ್ವ ವಿಸ್ತಾ ಅಪಾರ್ಟ್ ಮೆಂಟ್ ನಿವಾಸಿ ಎಂ. ಚಂದ್ರ ಶೆಟ್ಟಿ ತನ್ನ ಹೆಂಡತಿಗೆ ಸಂಬಂದಿಸಿದ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗಾಂದೋಡಿ ಎಂಬಲ್ಲಿರುವ ಮನೆಗೆ ಬುಧವಾರ ಬೆಳಗಿನ ಜಾವ ಸುಮಾರು 2 ಗಂಟೆಗೆ ಬಿ ಮೂಡ ನಿವಾಸಿ, ಆರೋಪಿ ಸುಮಿತ್ ಆಳ್ವ (45) ಎಂಬಾತ ತನ್ನ 4 ಮಂದಿ ಸಹಚರರ ಜೊತೆ ಸೇರಿ ಮಹೇಂದ್ರ XUV 500 ವಾಹನದಲ್ಲಿ ಬಂದು, ಮನೆಯ ಎದುರುಗಡೆ ಅಳವಡಿಸಿದ ಕಬ್ಬಿಣ ಗೇಟ್ ಮುರಿದು ಮನೆಯಂಗಳಕ್ಕೆ ಬಂದು ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿರುತ್ತಾರೆ. ಪರಿಣಾಮ ಮನೆಯ ಮುಂಬಾಗಿಲು ಸುಟ್ಟು ಹೋಗಿದ್ದು, ಹೊರಾಂಗಣದಲ್ಲಿದ್ದ ಕುರ್ಚಿ ಸಂಪೂರ್ಣ ಸುಟ್ಟು ಹೋಗಿರುತ್ತದೆ. ಮನೆಯಲ್ಲಿ ಬಾಡಿಗೆಗೆ ವಾಸವಿರುವ ಪ್ರದೀಪ ಹಾಗೂ ಮನ್ಸೂರ್ ಎಂಬವರು ಮನೆಯ ಒಳಗಿನಿಂದ ಗಮನಿಸಿ, ಬೊಬ್ಬೆ ಹೊಡೆದು, ಹೊರಬಂದು ಪ್ರಾಣಾಪಾಯದಿಂದ ಪಾರಾಗಿ ಚಂದ್ರ ಶೆಟ್ಟಿ ಅವರಿಗೆ ಕರೆ ಮಾಡಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮ್ಮಿ ಅಲಿಯಾಸ್ ಸುಮಿತ್ ಆಳ್ವ
ಸಮಾಜದ ಎದುರಿಗೆ ಹರೇ ರಾಮ ಹರೇ ಕೃಷ್ಣ ಭಕ್ತನಾಗಿದ್ದ ಈತ ಬಿಸಿರೋಡಿನ ಆಸುಪಾಸಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ. ಈ ಹಿಂದೆ ಕಳ್ಳ ಬಟ್ಟಿ ಮತ್ತು ಜುಗಾರಿ ದಂಧೆ ನಡೆಸುತ್ತಿದ್ದ ಎಂಬ ಆರೋಪವಿದೆ. ಕೆಲವೊಂದು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.