ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2023ನೇ ಸಾಲಿನ ಗ್ರಾಮೀಣ ವಿಜ್ಞಾನ ಮೇಳವಾದ ವಿಜ್ಞಾನ ರಶ್ಮಿ ಜರುಗಿತು.
ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನವೇ ಒಂದು ವಿಜ್ಞಾನ. ವಿಜ್ಞಾನವನ್ನು ಸಮರ್ಪಕವಾಗಿ ತಿಳಿದುಕೊಂಡಾಗ ಬದುಕು ಸುಲಲಿತವಾಗುತ್ತದೆ. ಆದ್ದರಿಂದ ವಿಜ್ಞಾನವನ್ನು ಹೆಚ್ಚು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಭಕ್ತಕೋಡಿಯ ಎಸ್.ಜಿ.ಎಂ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮೋಹನ್ ಕುಮಾರ್ ಮಾತನಾಡಿ, ವಿದ್ಯಾರಶ್ಮಿಯ ಸಾರ್ವಜನಿಕ ಕಾಳಜಿ ಅಭಿನಂದನೀಯ. ಸಂಸ್ಥೆಯ ಬಹುಮುಖಿ ಕಾರ್ಯಚಟುಟಿಕೆಗಳು ಗ್ರಾಮೀಣ ಭಾಗದ ಮಕ್ಕಳಿಗೆ ಒಂದು ವರವೇ ಆಗಿದೆ ಎಂದು ಹೇಳಿ, ಪಿಯುಸಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳು ವಿದ್ಯಾರಶ್ಮಿಯನ್ನು ಪ್ರಥಮ ಆಯ್ಕೆಯನ್ನಾಗಿ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಸೀತಾರಾಮ ಕೇವಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ, ಸಂಯೋಜಕಿ ಕಸ್ತೂರಿ ಕೆ.ಜಿ. ಮತ್ತು ವಿದ್ಯಾರ್ಥಿ ನಾಯಕ ದೀಪಕ್ ಬಿ.ಎಂ. ಉಪಸ್ಥಿತರಿದ್ದರು.
ಶಿಫಾಲಿ ಮತ್ತು ಬಳಗದವರು ಪ್ರಾರ್ಥಿಸಿದರು. ಆಯ್‌ಷತ್ ವಫಾ ಕಾರ್ಯಕ್ರಮ ನಿರೂಪಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸನಾ ಫಾತಿಮಾ ಕಾರ್ಯಕ್ರಮ ನಿರೂಪಣೆ ಮಾಡಿದರು.
ಬಹುಮಾನ ವಿತರಣೆ
10ನೆ ತರಗತಿಯವರಿಗಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಂಪ್ಯೂಟರ್ ಟೈಪಿಂಗ್‌ನಲ್ಲಿ ನರಿಮೊಗರಿನ ಸರಸ್ವತಿ ವಿದ್ಯಾಮಂದಿರದ ಕೆ.ಎಸ್. ಸುಧನ್ವ ಪ್ರಥಮ, ನರಿಮೊಗರಿನ ಸಾಂದೀಪನಿಯ ಧನುಷ್ ಯಾದವ್ ದ್ವಿತೀಯ, ನರಿಮೊಗರಿನ ಸರಸ್ವತಿ ವಿದ್ಯಾಮಂದಿರದ ಜಿಷ್ಮಿತಾ ತೃತೀಯ, ಔಷಧೀಯ ಸಸ್ಯಗಳ ಗುರುತು ಹಚ್ಚುವಿಕೆಯಲ್ಲಿ ಕೆ.ಪಿ.ಎಸ್.ನ ಕೆಯ್ಯೂರಿನ ರೇಷ್ಮಾ ಎಂ. ಪ್ರಥಮ, ಭಕ್ತಕೋಡಿಯ ಎಸ್.ಜಿ.ಎಂ. ಪ್ರೌಢಶಾಲೆಯ ಅಕ್ಷತಾ ಎಸ್. ದ್ವಿತೀಯ, ನರಿಮೊಗರಿನ ಸಾಂದೀಪನಿಯ ಕೌಶಿಕ್ ಕೆ. ತೃತೀಯ, ಭಾಷಣ ಸ್ಪರ್ಧೆಯಲ್ಲಿ ಎಸ್.ಜಿ.ಎಂ. ಪ್ರೌಢಶಾಲೆಯ ಶ್ರೇಯಾ ಪ್ರಥಮ, ನರಿಮೊಗರಿನ ಸರಸ್ವತಿ ವಿದ್ಯಾಮಂದಿರದ ರಶ್ಮಿ ರೈ ದ್ವಿತೀಯ, ನರಿಮೊಗರಿನ ಸಾಂದೀಪನಿಯ ಕೌಶಿಕ್ ಕೆ. ತೃತೀಯ, ರಸಪ್ರಶ್ನೆಯಲ್ಲಿ (ಗುಂಪು ಸ್ಪರ್ಧೆ) ಎಸ್.ಜಿ.ಎಂ. ಪ್ರೌಢಶಾಲೆ ಪ್ರಥಮ, ನರಿಮೊಗರಿನ ಸರಸ್ವತಿ ವಿದ್ಯಾಮಂದಿರ ದ್ವಿತೀಯ, ಕೆ.ಪಿ.ಎಸ್.ನ ಕೆಯ್ಯೂರು ತೃತೀಯ ಸ್ಥಾನ ಪಡೆದುಕೊಂಡರು.