ಹೊಸದಿಲ್ಲಿ: ಕೆಲವು ದಿನಗಳಿಂದ ಚರ್ಚೆಯಲ್ಲಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಹಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ಮಹುವಾ ಮೊಹಿತ್ರಾ ಉಚ್ಛಾಟನೆಗೆ ನೈತಿಕ ಸಮಿತಿಯು ಶಿಫಾರಸು ಮಾಡಿತ್ತು.
ಸಂಸತ್ ನಲ್ಲಿ ಪ್ರಶ್ನೆ ಕೇಳಲು ಮಹುವಾ ಮೊಹಿತ್ರಾ ಹಣ ಪಡೆದಿದ್ದಾರೆಂದು ಆರೋಪಿಸಲಾಗಿತ್ತು. ಸಂಸತ್ತಿನ ನೈತಿಕ ಸಮಿತಿಯು ಈ ಪ್ರಕರಣದಲ್ಲಿ ಮಹುವಾ ಮೊಯಿತ್ರಾ ಅವರನ್ನು ತಪ್ಪಿತಸ್ಥರೆಂದು ವರದಿ ನೀಡಿದೆ. ಅಲ್ಲದೆ ಸಂಸತ್ತಿನ ಕೆಳಮನೆಯಿಂದ ಅವರನ್ನು ಹೊರಹಾಕಲು ಶಿಫಾರಸು ಮಾಡಿತು.
ಲೋಕಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವರು ಮಂಡಿಸಿದ ಮಹುವಾ ಮೊಹಿತ್ರಾ ಅವರನ್ನು ಉಚ್ಛಾಟನೆ ಮಾಡುವ ಪ್ರಸ್ತಾವನೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ತನ್ನ ಉಚ್ಚಾಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, ನೈತಿಕ ಸಮಿತಿಯು “ಪುರಾವೆಯಿಲ್ಲದೆ ಕ್ರಮ ಕೈಗೊಂಡಿದೆ” ಎಂದು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನ್ನ ಬಾಯಿ ಮುಚ್ಚಿಸುವ ಮೂಲಕ ಅದಾನಿ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಈ ನರೇಂದ್ರ ಮೋದಿ ಸರ್ಕಾರ ಭಾವಿಸಿದೆ. ನೀವು ಬಳಸಿದ ಆತುರದ ಪ್ರಕ್ರಿಯೆಯ ದುರುಪಯೋಗವು ಅದಾನಿ ನಿಮಗೆ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ” ಎಂದು ಮೊಹಿತ್ರಾ ಹೇಳಿದರು.
ಮಹುವಾ ಮೊಹಿತ್ರಾ ಅವರು ಕೃಷ್ಣನಗರ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದರು.