ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಕೇಂದ್ರ ಸಚಿವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರು ಹೊಂದಿದ್ದ ಖಾತೆಗಳನ್ನು ಸಂಪುಟದ ಇತರ ಸದಸ್ಯರಿಗೆ ಮರುಹಂಚಿಕೆ ಮಾಡಲಾಗಿದೆ. ಈ ಪೈಕಿ ಶೋಭಾ ಕರಂದ್ಲಾಜೆ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯ ಹೊಣೆ ಸಿಕ್ಕಿದೆ.
ಶೋಭಾ ಕರಂದ್ಲಾಜೆ ಅವರಿಗೆ ಆಹಾರ ಸಂಸ್ಕರಣೆ ಖಾತೆ, ರಾಜೀವ್ ಚಂದ್ರಶೇಖರ್ ಅವರಿಗೆ ಜಲಶಕ್ತಿ ಖಾತೆಯನ್ನು ನೀಡಲಾಗಿದೆ. ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವರಾಗಿದ್ದ ನರೇಂದ್ರ ಸಿಂಗ್ ತೋಮರ್ ಅವರ ಖಾತೆಯನ್ನು ಅರ್ಜುನ್ ಮುಂಡಾ ಅವರಿಗೆ ನೀಡಲಾಗಿದೆ. ಡಾ. ಭಾರತಿ ಪ್ರವೀಣ್ ಪವಾರ್ ಅವರಿಗೆ ರೇಣುಕಾ ಸಿಂಗ್ ಸರುತಾ ಹೊಂದಿದ್ದ ಬುಡಕಟ್ಟು ವ್ಯವಹಾರಗಳ ಖಾತೆ ನೀಡಲಾಗಿದೆ.
ಕೇಂದ್ರ ಸಂಪುಟದ ಶಿಫಾರಸಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಈ ಬದಲಾವಣೆಗೆ ಸಮ್ಮತಿ ಸೂಚಿಸಿದ್ದಾರೆ.