ತೆಲಂಗಾಣ: ತೆಲಂಗಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಟಿಪಿಸಿಸಿ ಅಧ್ಯಕ್ಷ, ಕೊಡಂಗಲ್ ಶಾಸಕ ರೇವಂತ್ ರೆಡ್ಡಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
ಹೈದರಾಬಾದ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು.
ರೇವಂತ್ ರೆಡ್ಡಿ ಜೊತೆ ಉಪಮುಖ್ಯಮಂತ್ರಿಯಾಗಿ ಮಧಿರ ಶಾಸಕ ಹಾಗೂ ದಲಿತ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಪದಗ್ರಹಣ ಮಾಡಿದರು. ಟಿಪಿಸಿಸಿ ಮಾಜಿ ಅಧ್ಯಕ್ಷ, ಎನ್. ಉತ್ತಮ್ ಕುಮಾರ್ ರೆಡ್ಡಿ, ಶಾಸಕರಾದ ಶ್ರೀಧರ್ ಬಾಬು, ಪೊನ್ನಂ ಪ್ರಭಾಕರ್, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ದಾಮೋದರ್ ರಾಜನರಸಿಂಹ, ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ದಾನ ಅನಸೂಯ, ತುಮ್ಮಲ ನಾಗೇಶ್ವರ್ ರಾವ್, ಕೊಂಡ ಸುರೇಖಾ ಮತ್ತು ಜೂಪಲ್ಲಿ ಕೃಷ್ಣ ರಾವ್ ಸಂಪುಟ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಇಂಧನ ಸಚಿವ ಕೆ.ಜೆ ಜಾರ್ಜ್, ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಕಾಲಿಟ್ಟ ರೇವಂತ್ ರೆಡ್ಡಿ, ಆರಂಭದಲ್ಲಿ ಬಿಜೆಪಿ-ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನ ಯುವ ನಾಯಕರಾಗಿದ್ದರು. ಪ್ರಸ್ತುತ ಸುಮಾರು 20 ವರ್ಷಗಳ ರಾಜಕೀಯ ಜೀವನ ಪೂರೈಸಿರುವ ರೇವಂತ್ ರೆಡ್ಡಿ ತೆಲಂಗಾಣದ ಪ್ರಮಖ ಪಕ್ಷಗಳಾದ ಬಿಆರ್‌ಎಸ್, ಟಿಡಿಪಿಯಲ್ಲಿ ಗುರುತಿಸಿಕೊಂಡಿದ್ದರು. ಇದೀಗ ತೆಲಂಗಾಣದ ರಾಜ್ಯದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.