ಚಂಡೀಗಢ: ಭಾರತ-ಪಾಕಿಸ್ಥಾನಗಳ ನಡುವಿನ ಪ್ರೇಮಪ್ರಸಂಗಗಳು ಹೆಚ್ಚುತ್ತಿವೆ. ಕೆಲವು ತಿಂಗಳ ಹಿಂದೆ ಪಾಕಿಸ್ಥಾನಿ ಸೀಮಾ ಹೈದರ್ ಭಾರತಕ್ಕೆ ಆಗಮಿಸಿ, ಸಚಿನ್ ಮೀನಾರನ್ನು ವಿವಾಹವಾಗಿದ್ದಾರೆ. ಅದರ ಬೆನ್ನಲ್ಲೇ ರಾಜಸ್ಥಾನದ ಅಂಜು ಎಂಬಾಕೆ ಪಾಕಿಸ್ಥಾನಕ್ಕೆ ತೆರಳಿದ್ದರು. ಇದೀಗ ಕರಾಚಿಯ ಜವೇರಿಯಾ ಖಾನುಮ್ ವಾಘಾ-ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಮಂಗಳವಾರ ಭಾರತಕ್ಕೆ ಆಗಮಿಸಿದ್ದಾರೆ.
ಅವರ ಉದ್ದೇಶ ಕೋಲ್ಕತಾದಲ್ಲಿರುವ ತಮ್ಮ ಪ್ರಿಯಕರ ಸಮೀರ್ ಖಾನ್‌ರನ್ನು ವಿವಾಹವಾಗುವುದು. ಜವೇರಿಯಾರನ್ನು ಅಮೃತಸರ ಜಿಲ್ಲೆಯ ಅಟ್ಟಾರಿಯಲ್ಲಿ ವರನ ಕಡೆಯವರು ಆತ್ಮೀಯವಾಗಿ ಬರಮಾಡಿಕೊಂಡರು. ಮುಂದಿನ ವರ್ಷ ಜನವರಿಯಲ್ಲಿ ಸಮೀರ್ ಖಾನ್‌ರೊಂದಿಗೆ ಜವೇರಿಯಾ ಮದುವೆ ನಿಶ್ಚಯವಾಗಿದೆ.
“ಐದು ವರ್ಷಗಳ ಪ್ರಯತ್ನ ಫಲ ನೀಡಿದೆ. ಎರಡು ಬಾರಿ ವೀಸಾಗಾಗಿ ಪ್ರಯತ್ನಿಸಿದೆ. ಆದರೆ ಅದು ತಿರಸ್ಕಾರಗೊಂಡಿತು. ಮೂರನೇ ಬಾರಿ ನನಗೆ ವೀಸಾ ದೊರೆಯಿತು. 45 ದಿನಗಳ ವೀಸಾ ಲಭ್ಯವಾಗಿದೆ. ಮದುವೆಗಾಗಿ ಭಾರತಕ್ಕೆ ಆಗಮಿಸಿರುವುದು ಖುಷಿ ತಂದಿದೆ’ ಎಂದು ಜವೇರಿಯಾ ಹೇಳಿದ್ದಾರೆ.
“ಕಲಿಕೆ ಅನಂತರ ಜರ್ಮನಿಯಿಂದ ಭಾರತಕ್ಕೆ ಮರಳಿದೆ. 2018ರ ಮೇಯಲ್ಲಿ ನನ್ನ ತಾಯಿಯ ಮೊಬೈಲ್‌ನಲ್ಲಿ ಜವೇರಿಯಾ ಫೋಟೋ ನೋಡಿದೆ. ಆಗಲೇ ಆಕೆಯನ್ನೇ ಮದುವೆಯಾಗುವುದಾಗಿ ನಿರ್ಧರಿಸಿದೆ. ಈ ಹಿಂದೆ ಕೊರೊನಾ ಸಮಯದಲ್ಲಿ ಎರಡು ಬಾರಿ ವೀಸಾ ತಿರಸ್ಕಾರಗೊಂಡಿತು. ಇದೀಗ ವೀಸಾ ದೊರೆತಿದ್ದು, ಇದ್ದಕ್ಕಾಗಿ ಭಾರತ ಸರಕಾರಕ್ಕೆ ಧನ್ಯವಾದಗಳು’ ಎಂದು ಸಮೀರ್ ಖಾನ್ ಹೇಳಿದ್ದಾರೆ.