ಮಂಗಳೂರಿನ ಬಿಜೈ ಹಾಗೂ ನ್ಯಾಯಾಲಯ ರಸ್ತೆಯ ಗೋಡೆಗಳ ಮೇಲೆ ಬರೆದಿದ್ದ ಬರಹದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನಾ ಸಂಘಟನೆ ಉಗ್ರರ ಕೈವಾಡವಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಿಳಿಸಿದೆ ಎಂದು ಹೇಳಲಾಗಿದೆ.
2020ರ ನವೆಂಬರ್ 27ರಂದು ಲಷ್ಕರ್–ಎ–ತಯಬಾ ಹಾಗೂ ತಾಲಿಬಾನ್ ಪರವಾಗಿ ಗೋಡೆ ಬರಹ ಬರೆಯಲಾಗಿತ್ತು. ಕೃತ್ಯ ಎಸಗಿದ್ದ ಆರೋಪದಡಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್, ಮಾಝ್ ಮುನೀರ್ ಅಹ್ಮದ್ ಹಾಗೂ ಸಾದತ್‌ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ‘ಪ್ರಚಾರಕ್ಕಾಗಿ ಆರೋಪಿಗಳು ಕೃತ್ಯ ಎಸಗಿದ್ದರು’ ಎಂಬುದಾಗಿ ಅಭಿಪ್ರಾಯಪಟ್ಟು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದರ ನಡುವೆಯೇ ಪ್ರಕರಣದ ಮತ್ತೊಬ್ಬ ಆರೋಪಿ ಅರಾಫತ್ ಅಲಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್ 13ರಂದು ಬಂಧಿಸಿದ್ದ ಎನ್‌ಐಎ ಅಧಿಕಾರಿಗಳು, ವಿಚಾರಣೆಗೆ ಒಳಪಡಿಸಿದ್ದರು. ‘ಐಎಸ್ ಉಗ್ರರ ನಿರ್ದೇಶನದಂತೆ ಗೋಡೆ ಬರಹ ಬರೆದಿದ್ದೇವೆ’ ಎಂದು ಅರಾಫತ್ ಹೇಳಿಕೆ ನೀಡಿದ್ದ. ಈ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತಂದಿರುವ ಎನ್‌ಐಎ ಅಧಿಕಾರಿಗಳು, ಪ್ರಕರಣದ ಮರು ತನಿಖೆಗೆ ಸಜ್ಜಾಗಿದ್ದಾರೆ. ಈ ಸಂಬಂಧ ಕಾನೂನು ಪ್ರಕ್ರಿಯೆ ಆರಂಭವಾಗಿದೆ.
ಗೋಡೆ ಬರಹ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದೀಗ ಪ್ರಕರಣದ ಎಲ್ಲ ಕಡತಗಳನ್ನು ಸುಪರ್ದಿಗೆ ಪಡೆಯಲಿರುವ ಎನ್‌ಐಎ ಅಧಿಕಾರಿಗಳು, ಮರು ತನಿಖೆ ನಡೆಸಲಿದ್ದಾರೆ. ಆರೋಪ ಪಟ್ಟಿ ಸಲ್ಲಿಕೆಯಾದ ನಂತರ ಎನ್‌ಐಎ ಅಧಿಕಾರಿಗಳು ಹೊಸದಾಗಿ ತನಿಖೆ ನಡೆಸುತ್ತಿರುವ ರಾಜ್ಯದ ಮೊದಲ ಪ್ರಕರಣ ಇದಾಗಿದೆ ಎಂದು ಮೂಲಗಳು ಹೇಳಿವೆ.
ಭಯ ಹುಟ್ಟಿಸಿ ವಿಧ್ವಂಸಕ ಕೃತ್ಯ
ಎಂಜಿನಿಯರಿಂಗ್ ಪದವೀಧರ ಅರಾಫತ್, ಬೆಂಗಳೂರಿನಲ್ಲಿ ಕೆಲ ವರ್ಷ ವಾಸವಿದ್ದ. ತಮ್ಮೂರಿನ ಬಟ್ಟೆ ವ್ಯಾಪಾರಿ ಮೊಹಮ್ಮದ್ ಶಾರೀಕ್, ಎಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್ ಅಹ್ಮದ್ ಹಾಗೂ ಎಂಜಿನಿಯರಿಂಗ್ ಪದವೀಧರ ಸಾದತ್ ಜೊತೆ ಸೇರಿ ಐಎಸ್ ಜೊತೆ ನಂಟು ಬೆಳೆಸಿಕೊಂಡಿದ್ದ. ನಾಲ್ವರು ಸೇರಿಕೊಂಡು ಐಎಸ್ ಉಗ್ರರ ಅಣತಿಯಂತೆ ಗೋಡೆ ಬರಹ ಬರೆದಿದ್ದರು’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
‘ಗೋಡೆ ಬರಹ ಪ್ರಕರಣದಲ್ಲಿ ಮೂವರು ಸಿಕ್ಕಿಬೀಳುತ್ತಿದ್ದಂತೆ ಅರಾಫತ್, ದುಬೈಗೆ ಹೋಗಿ ಅಲ್ಲಿಯ ಸುಗಂಧ ದ್ರವ್ಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಜಾಮೀನು ಪಡೆದಿದ್ದ ಶಾರೀಕ್, ಐಎಸ್ ಉಗ್ರರ ಜೊತೆ ನಂಟು ಮುಂದುವರಿಸಿ, ಕುಕ್ಕರ್ ಬಾಂಬ್ ಸ್ಫೋಟಿಸಲು ಹೋಗಿ ಗಾಯಗೊಂಡಿದ್ದ. ಸದ್ಯ ಈತ ಜೈಲಿನಲ್ಲಿದ್ದಾನೆ’ ಎಂದು ಮೂಲಗಳು ಹೇಳಿವೆ.
ಐಎಸ್ ಉಗ್ರರಿಂದ ಹಣ
‘ಆರೋಪಿಗಳಿಗೆ ಐಎಸ್ ಉಗ್ರರು ಹಣ ಕಳುಹಿಸುತ್ತಿದ್ದರೆಂದು ಗೊತ್ತಾಗಿದೆ. ವಿಧ್ವಂಸಕ ಕೃತ್ಯಗಳ ನಂತರ ದೇಶದಿಂದ ಪರಾರಿಯಾಗಲು ಉಗ್ರರು ಸಹಾಯ ಮಾಡಲು ಒಪ್ಪಿಕೊಂಡಿದ್ದರೆಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆದಿದೆ. ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿಯೂ ಇದೆ’ ಎಂದು ಮೂಲಗಳು ತಿಳಿಸಿವೆ.
ಗೋಡೆ ಬರಹದಲ್ಲಿ ಏನಿತ್ತು?
ಮಂಗಳೂರಿನ ಬಿಜೈ ಕದ್ರಿ ಹಾಗೂ ಪಿವಿಎಸ್ ವೃತ್ತ ಬಳಿಯ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಪ್ರತ್ಯೇಕವಾಗಿ ಗೋಡೆ ಬರಹ ಬರೆಯಲಾಗಿತ್ತು. ಒಂದು ಕಡೆ ‘ಗಸ್ತಕ್ ಎ ರಸೂಲ್ ಎಕ್ ಹಿ ಸಜಾ ತನ್ ಸಯಾ ಜುದಾ (‘ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ; ಅದು ದೇಹದಿಂದ ತಲೆ ಬೇರ್ಪಡಿಸುವುದು)’ ಎಂದು ಉರ್ದು ಉಕ್ತಿಯನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿತ್ತು. ಇನ್ನೊಂದು ಗೋಡೆಯಲ್ಲಿ ‘ಲಷ್ಕರ್–ಎ–ತಯಬಾ ಹಾಗೂ ತಾಲಿಬಾನ್ ಜಿಂದಾಬಾದ್’ ಎಂಬಿತ್ಯಾದಿ ಬರಹ ಬರೆಯಲಾಗಿತ್ತು.