ಪುತ್ತೂರು: ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಪುತ್ತೂರು ಬಾರ್ ಎಸೋಸಿಯೇಶನ್ ವತಿಯಿಂದ ಖಂಡನಾ ಸಭೆ ನಡೆದು, ನ್ಯಾಯಾಲಯದ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಖಂಡನಾ ಸಭೆಯಲ್ಲಿ ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ಹೆಲ್ಮೆಟ್ ಧರಿಸದೇ ಇದ್ದ ವಕೀಲರೊಬ್ಬರ ಮೇಲೆ ಪೊಲೀಸರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲ, ಪ್ರತಿಭಟಿಸಿದ ಇತರ ವಕೀಲರ ಮೇಲೆ ಸುಳ್ಳು ಕೇಸ್ ದಾಖಲು ಮಾಡಿರುವುದು ಖಂಡನೀಯ. ಇದಲ್ಲದೇ, ವಕೀಲರಿಗೆ ಸವಾಲು ಹಾಕಿದ್ದು ಸರಿಯಲ್ಲ. ಪೊಲೀಸರು ವಕೀಲರ ಮೇಲೆ ನಡೆಸಿರುವುದು ಮಾನವ ಹಕ್ಕಿನ ಉಲ್ಲಂಘನೆ. ಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಕೀಲರಿಂದ ಕೆಲವೊಂದು ನಿರ್ಣಾಯಕ ಅಂಶಗಳು ಕೇಳಿ ಬಂದಿದ್ದು, ಸುಳ್ಳು ಕೌಂಟರ್ ಕೇಸು ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾದವರನ್ನು ಅಮಾನತುಗೊಳಿಸುವಂತಾಗಬೇಕು. ಪೊಲೀಸರಿಗೆ ನಕ್ಷಲೈಟ್ ಜತೆಗೆ ಸಂಪರ್ಕ ಇದೆಯೇ ಎಂಬುದನ್ನು ತನಿಖೆ ಮಾಡಬೇಕು. ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು. ಘಟನೆ ಕುರಿತು ಹೈಕೋರ್ಟ್ ಮೊರೆ ಹೋಗಿ ತಪ್ಪಿತಸ್ಥರ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಬಳಿಕ ನ್ಯಾಯಾಲಯದ ಆವರಣದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯನ್ನುದ್ದೇಶಿಸಿ ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ ಮಾತನಾಡಿ, ಒಂದು ದರೋಡೆ ಆದರೆ, ಹಲ್ಲೆ ಆದರೆ ಸಿಸಿ ಟಿವಿ ಫೂಟೇಜ್ ಇರುವುದಿಲ್ಲ. ಆದರೆ ಹೆಲ್ಮೇಟ್ ಧರಿಸದೇ ಇದ್ದರೆ, ಪಿಟ್ಟಿ ಕೇಸ್ ಹಾಕಿದರೆ ಅಲ್ಲಿ ಸಿಸಿ ಟಿವಿ ಫೂಟೇಜ್ ಸರಿಯಾಗಿ ಇರ್ತದೆ. ಇದರ ಹಿಂದೇ ಇರುವುದು ಯಾರು ಎಂದು ಪ್ರಶ್ನಿಸಿದ ಅವರು, ಈ ಘಟನೆಯ ಕುರಿತು ಕೂಲಂಕುಶವಾದ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಈ ಕುರಿತು ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ನ್ಯಾಯವಾದಿನರಸಿಂಹ ಪ್ರಸಾದ್ ಮಾತನಾಡಿ, ಈಗಾಗಲೇ ಹಾಕಿದ ಸುಳ್ಳು ಕೇಸನ್ನು ಹಿಂಪಡೆಯಬೇಕು. ಸಮುದಾಯದ ಮೇಲೆ ನಿರಂತರವಾಗಿ ನಡೆಯುವ ಹಲ್ಲೆಯನ್ನು ನಾವೆಲ್ಲರೂ ಒಕ್ಕೋರಲಿನಿಂದ ಖಂಡಿಸಬೇಕು ಎಂದು ತಿಳಿಸಿದರು.
ಖಂಡನಾ ಸಭಾ ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್, ಬಾರ್ ಎಸೋಸಿಯೇಶನ್ ನ ದೇವಾನಂದ, ಜಗನ್ನಾಥ, ಚಿನ್ಮಯ್, ಸೀಮಾ ಉಪಸ್ಥಿತರಿದ್ದರು. ಸಭೆಯಲ್ಲಿ ನ್ಯಾಯವಾದಿಗಳು ಉಪಸ್ಥಿತರಿದ್ದರು.