ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ!!

ಬೆಂಗಳೂರು: ಹಾಸನದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್​​ನಲ್ಲಿ ಬಂದರೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದ ಕಾರಣ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ನಡೆಯಿತು. ಇದರ ಬೆನ್ನಲ್ಲೇ ಮಗುವಿನ ಪೋಷಕರು ಹಾಗೂ ಆ್ಯಂಬುಲೆನ್ಸ್‌ ಚಾಲಕರು ನಿಮ್ಹಾನ್ಸ್‌ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಶವ ಪರೀಕ್ಷೆಯ ನಂತರ ಮಗುವಿನ ಮೃತದೇಹ ಪಡೆಯಲು ಪೋಷಕರು 24 ಗಂಟೆಗಳಿಗೂ ಹೆಚ್ಚು ಕಾಲ ಕಾಯುವಂತ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಸಂಜೆಯವರೆಗೂ ನಡೆಯಿತು.

ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಪರಿಹಾರ ನೀಡುವಂತೆ ಒತ್ತಾಯಿಸಿ ಮೃತದೇಹವನ್ನು ಮುಂದಿಟ್ಟುಕೊಂಡ ಪೋಷಕರು ಹಾಗೂ ಆ್ಯಂಬುಲೆನ್ಸ್ ಚಾಲಕರು ತುರ್ತು ಚಿಕಿತ್ಸಾ ವಿಭಾಗದ ಹೊರಗೆ ಪ್ರತಿಭಟನೆ ನಡೆಸಿದರು.



































 
 

ಈ ವೇಳೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಮಗುವನ್ನು ರಕ್ಷಿಸಬಹುದಿತ್ತು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಕೀಯ ಸಿಬ್ಬಂದಿಗೆ ಕನ್ನಡ ತಿಳಿದಿಲ್ಲ ಮತ್ತು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪ್ರಾವೀಣ್ಯತೆ ಹೊಂದಿದ್ದಾರೆ. ಹೀಗಾಗಿ ಮಗುವಿನ ಸ್ಥಿತಿ ಬಗ್ಗೆ ವೈದ್ಯರ ಬಳಿ ಮಾತುಕತೆ ನಡೆಸಲು ಸಾಧ್ಯವಾಗಲಿಲ್ಲ. ಮಗುವಿನ ಪೋಷಕರಿಗೆ ಸರ್ಕಾರ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಸಚಿವರು ಮತ್ತು ಸ್ಥಳೀಯ ಶಾಸಕರು ಭೇಟಿ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿದೆ ಎಂದು ಹೇಳಿ, ಮಗುವಿನ ಶವವನ್ನು ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದರು.

ಇತರ ರೋಗಿಗಳಿಗೆ ಮತ್ತು ವಾಹನಗಳಿಗೆ ಅನಾನುಕೂಲತೆಯಾಗುತ್ತಿದ್ದು, ಪ್ರತಿಭಟನೆ ಕೈಬಿಡುವಂತೆ ಸಿದ್ದಾಪುರ ಪೊಲೀಸರು ಮನವಿ ಮಾಡಿಕೊಂಡರು. ಈ ವೇಳೆ ಪ್ರತಿಭಟನಾಕಾರರು ನಾವು ಪ್ರತಿಭಟನೆ ನಡೆಸುತ್ತಿಲ್ಲ. ನಿಮ್ಹಾನ್ಸ್ ನಿರ್ಲಕ್ಷ್ಯದ ವಿರುದ್ಧ ಮಾತ್ರ ಮಾತನಾಡುತ್ತಿದ್ದೇವೆಂದು ತಿಳಿಸಿದರು.

ನಿಮ್ಹಾನ್ಸ್‌ನ ವೈದ್ಯರು ನಗರದ ಹೊರಗಿನಿಂದ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ. ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸುತ್ತಾರೆ. ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಯ ಆವರಣಕ್ಕೆ ಪ್ರವೇಶಿಸಲು ಕೂಡ ಅನುಮತಿ ನೀಡುವುದಿಲ್ಲ ಎಂದು ಆರೋಪಿಸಿದರು. ಅಲ್ಲದೆ, ನಿಮ್ಹಾನ್ಸ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆ ಆಗ್ರಹಿಸಿದರು.

ಬಳಿಕ ಪೊಲೀಸರು ತಮ್ಮ ಮಿತಿಗಳನ್ನು ವಿವರಿಸಿ, ಕರ್ನಾಟಕ ವೈದ್ಯಕೀಯ ಮಂಡಳಿಗೆ (ಕೆಎಂಸಿ) ಮನವಿ ಪತ್ರ ಸಲ್ಲಿಸುವಂತೆ ಸಲಹೆ ನೀಡಿದರು.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ನಿಮ್ಹಾನ್ಸ್ ಆಸ್ಪತ್ರೆಯ ಅಧಿಕಾರಿಗಳು, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ (ಹಿಮ್ಸ್) ನಮಗೆ ಯಾವುದೇ ಮಾಹಿತಿಗಳೂ ಬಂದಿರಲಿಲ್ಲ. ಮಗುವನ್ನು ಝೀರೋ ಟ್ರಾಫಿಕ್ ಮೂಲಕ ಕರೆದುಕೊಂಡು ಬರಲಾಗುತ್ತಿದೆ ಎಂದು ಪೊಲೀಸರೂ ಕೂಡ ಮಾಹಿತಿ ನೀಡಿರಲಿಲ್ಲ. ಆಂಬ್ಯುಲೆನ್ಸ್ ಚಾಲಕನ ಸಹೋದ್ಯೋಗಿ ಮಗುವಿನ ಆಗಮನಕ್ಕೆ ಕೇವಲ ಒಂದು ಗಂಟೆ ಮೊದಲು ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ.

ಇದೇ ವೇಳೆ ಚಿಕಿತ್ಸೆ ನೀಡಲು 90 ನಿಮಿಷ ತಡ ಮಾಡಲಾಗಿತ್ತು ಎಂಬ ಆರೋಪವನ್ನೂ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಮಗುವಿನ ಪೋಷಕರು 10 ನಿಮಿಷಗಳ ಕಾಲವಷ್ಟೇ ಕಾದಿದ್ದರು. ಮಗು ಬಂದ 10 ನಿಮಿಷಗಳಲ್ಲೇ ಅಗತ್ಯ ಕಾರ್ಯವಿಧಾನಗಳನ್ನು ಪ್ರಾರಂಭಿಸಲಾಗಿತ್ತು. ಮೆದುಳಿನ ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಮಗುವಿನ ಸ್ಥಿತಿ ಬಗ್ಗೆ ಪೋಷಕರಿಗೆ ವಿವರಿಸಲಾಗಿತ್ತು ಎಂದು ಹೇಳಿದ್ದಾರೆ.

ಇನ್ನು ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ನಿಮ್ಹಾನ್ಸ್ ನಿರ್ದೇಶಕರ ಜತೆ ಚರ್ಚಿಸುವುದಾಗಿ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top