ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೋಕೇಷನ್ ಟ್ರಾ್ಯಕಿಂಗ್ ಡಿವೈಸ್ (ವಿಎಲ್ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಡಿ.1ರಿಂದ ಆದೇಶ ಅನ್ವಯವಾಗಲಿದ್ದು, ಒಂದು ವರ್ಷದ ಅವಧಿಯೊಳಗೆ ಅಳವಡಿಸಿಕೊಳ್ಳುವಂತೆ ಗಡುವು ನೀಡಲಾಗಿದೆ.
ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲ ರೀತಿಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಬೇಕಿದ್ದು, 2024ರ ನ. 30ರವರೆಗೆ ಅವಕಾಶ ನೀಡಲಾಗಿದೆ.
ವಾಹನಗಳಿಗೆ ವಿಎಲ್ಟಿ ಮತ್ತು ಪ್ಯಾನಿಕ್ ಬಟನ್ ಡಿವೈಸ್ಗಳನ್ನು ಅಳವಡಿಸುವ ಸಂಬಂಧ ಗುತ್ತಿಗೆ ನೀಡಲು ಸಾರಿಗೆ ಇಲಾಖೆ 2023 ಫೆ. 9ರಂದು ಇ-ಟೆಂಡರ್ ಮೂಲಕ ಕಂಪನಿಗಳಿಂದ ಅರ್ಜಿ ಆಹ್ವಾನಿಸಿತ್ತು. ಇದರಲ್ಲಿ ಅರ್ಹತೆ ಹೊಂದಿರುವ 13 ಕಂಪನಿಗಳು ಆಯ್ಕೆಯಾಗಿದ್ದವು. ನಂತರ ಅ. 16ರಂದು ಸಾರಿಗೆ ಆಯುಕ್ತರು ಮತ್ತು ರಸ್ತೆ ಸುರಕ್ಷತಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವರವಾಗಿ ಚರ್ಚಿಸಿ ವಿಎಲ್ಟಿ ಮತ್ತು ಪ್ಯಾನಿಕ್ ಬಟನ್ ಸಾಧನಗಳಿಗೆ ಸ್ಪರ್ಧಾತ್ಮಕ ದರ ನಿಗದಿಪಡಿಸಲಾಗಿತ್ತು. ಆಯ್ಕೆಯಾಗಿರುವ ಕಂಪನಿಗಳು ವಾಹನಗಳಿಗೆ ಎಐಎಸ್ 140 ಪ್ರಮಾಣೀಕೃತ ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್ ಅಳವಡಿಸಲಿದೆ. ಈ ಯೋಜನೆ ತ್ವರಿತವಾಗಿ ಜಾರಿಯಾಗಬೇಕಿರುವುದರಿಂದ ಆರ್ಟಿಒಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳಿಗೆ ಮಾತ್ರ ಎಫ್.ಸಿ ನವೀಕರಣವಾಗಲಿದೆ.
ಬೆಲೆ ಎಷ್ಟು?
ವಿಎಲ್ಟಿ ವಿತ್ ಪ್ಯಾನಿಕ್ ಬಟನ್ ಬೆಲೆ 7,599 ರೂ. (ಜಿಎಸ್ಟಿ ಹೊರತುಪಡಿಸಿ)
ಯಾವ ವಾಹನ?
ಯೆಲ್ಲೋ ಬೋರ್ಡ್ನ ಟ್ಯಾಕ್ಸಿಗಳು, ಕ್ಯಾಬ್ಗಳು, ಖಾಸಗಿ ಬಸ್ಗಳು, ನ್ಯಾಷನಲ್ ಪರ್ವಿುಟ್ ಹೊಂದಿರುವ ಗೂಡ್ಸ್ ವಾಹನಗಳಿಗೆ ಅನ್ವಯ.
ಕಾರ್ಯನಿರ್ವಹಣೆ ಹೇಗೆ?
ವಿಎಲ್ಟಿ ಮಾನಿಟರಿಂಗ್ ನಕ್ಷೆಯಲ್ಲಿ ವಾಹನಗಳ ನೈಜ-ಸಮಯದ ಟ್ರ್ಯಾಕಿಂಗ್ ಮಾಡಲಾಗುತ್ತದೆ. ವಾಹನ ಎಲ್ಲಿದೆ? ಯಾವ ಮಾರ್ಗದಲ್ಲಿ ಪ್ರಯಾಣಿಸುತ್ತಿದೆ? ಮಾರ್ಗ ಬದಲಾವಣೆ ಸೇರಿ ಎಲ್ಲ ಮಾಹಿತಿ ಲಭ್ಯವಾಗಲಿದೆ. ಅತಿವೇಗ, ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಎಚ್ಚರಿಕೆ ಕೊಡಲಿದೆ. ವಾಹನದಲ್ಲಿ ಪ್ರಯಾಣಿಸುವ ತುರ್ತು ಪರಿಸ್ಥಿತಿ ಎದುರಾದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಕಮಾಂಡ್ ಸೆಂಟರ್ಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಕಮಾಂಡ್ ಸೆಂಟರ್ ತಕ್ಷಣ ಸ್ಪಂದಿಸಲಿದ್ದು, ಸ್ಥಳೀಯ ಪೊಲೀಸರಿಗೆ ತಿಳಿಸಿ, ನೆರವಿಗೆ ಧಾವಿಸುವಂತೆ ಸೂಚಿಸಬಹುದು.