ಪುತ್ತೂರು: ಎಸ್.ಆರ್.ಕೆ. ಲ್ಯಾಡರ್ಸ್ ಇದರ ಬೆಳ್ಳಿಹಬ್ಬ ಸಂಭ್ರಮ, ಲೋಗೋ ಅನಾವರಣ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಸಮಾರಂಭ ನ. 28ರಂದು ಮುಕ್ರಂಪಾಡಿ ಎಸ್.ಆರ್.ಕೆ. ಲ್ಯಾಡರ್ಸ್ ಆವರಣದಲ್ಲಿ ನಡೆಯಿತು.
ಲ್ಯಾಡರ್ಸ್’ಗೆ ಹತ್ತಿ ಹಸಿರು ನಿಶಾನೆ ತೋರಿಸುವ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್, ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕರಾದ ಕೇಶವ ಅವರಲ್ಲಿದ್ದ ಸ್ಪೂರ್ತಿ ಇಂದು ಬಹುದೊಡ್ಡ ಇಂಡಸ್ಟ್ರಿ ಕಟ್ಟಿ ಹಲವಾರು ಮಂದಿಗೆ ಉದ್ಯೋಗ ನೀಡುವಂತಾಗಿದೆ. ಅವರ ಮುಂದಿನ ಎಲ್ಲಾ ಕೆಲಸಗಳು, ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದ ಅವರು, ಪುತ್ತೂರಿನಲ್ಲಿ ಇಂಡಸ್ಟ್ರೀಸ್ ಬಹಳ ಕಡಿಮೆ ಸಂಖ್ಯೆಯಲ್ಲಿದೆ. ಒಂದು ಚಿಕ್ಕ ಸಂಸ್ಥೆಯಾಗಿ ಎಸ್ ಆರ್ ಕೆ ಲ್ಯಾಡರ್ಸ್ ಪ್ರಾರಂಭಗೊಂಡು ಇಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಅದರಲ್ಲೂ ಕೃಷಿಗೆ ಸಂಬಂಧಪಟ್ಟ ಸಂಸ್ಥೆಯಾಗಿ ಬೆಳೆದಿದೆ. ಕೇಶವ ಅವರಲ್ಲಿ ಅಂಗವೈಕಲ್ಯತೆ ಇದ್ದರೂ ಅದನ್ನೆಲ್ಲಾ ಮರೆತು ಎಲ್ಲರಿಗೂ ಸ್ಪೂರ್ತಿಯಾಗಿ ಬೆಳೆದಿರುವುದು ಶ್ಲಾಘನೀಯ ಎಂದರು.
ಬೆಳ್ಳಿಹಬ್ಬ ಸಂಭ್ರಮಕ್ಕೆ ರಕ್ತದಾನದಿಂದ ಚಾಲನೆ: ರಾಜಾರಾಮ್
ಲೋಗೋ ಅನಾವರಣಗೊಳಿಸಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್ ಮಾತನಾಡಿ, ಎಸ್ಆರ್ ಕೆ ಲ್ಯಾಡರ್ಸ್ ತನ್ನ 25ನೇ ವರ್ಷದ ಸಂಭ್ರಮಾಚರಣೆ ಜತೆಗೆ ದಾನಗಳಲ್ಲಿ ಶ್ರೇಷ್ಠವಾದ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಸಂತೋಷದ ವಿಚಾರ. ರಕ್ತದಾನ ಮನುಷ್ಯನಿಗೆ ಆಪತ್ಕಾಲದಲ್ಲಿ ಪ್ರಾಣ ಉಳಿಸುವಂತಹದ್ದು ಎಂದ ಅವರು, ಕೇಶವ ಅವರು ಬಹಳಷ್ಟು ಶ್ರಮ ವಹಿಸಿ ಕೃಷಿಕರಿಗೆ ಅನುಕೂಲವಾಗುವ ಉಪಕರಣಗಳ ಉತ್ಪಾದನೆ ಮಾಡುತ್ತಿದ್ದಾರೆ. ಇದೀಗ ಯಶಸ್ವಿಯಾಗಿ 25 ವರ್ಷ ಪೂರೈಸಿದ್ದು, ಸಂಸ್ಥೆ ಇನ್ನಷ್ಟು ಉನ್ನತಿ ಹೊಂದಲಿ ಎಂದು ಹೇಳಿ, ಸಂಸ್ಥೆಯ ಎಲ್ಲಾ ನೌಕರ ವರ್ಗದವರಿಗೆ ಶುಭಹಾರೈಸಿದರು.
ದೊಡ್ಡ ಕೈಗಾರಿಕೆಗಳು ಜಿಲ್ಲೆಗೆ ಬೇಡ: ಶಿವಶಂಕರ ಬೋನಂತಾಯ
ಸಂಸ್ಥೆಯ ಬೆಳ್ಳಿಹಬ್ಬ ಹಿನ್ನೆಲೆಯಲ್ಲಿ ಬೆಳ್ಳಿಯ ಲೋಗೋ ಅನಾವರಣ ಮಾಡಿ ಮಾತನಾಡಿದ ಪುತ್ತೂರು ಇಂಡಸ್ಟ್ರೀಸ್ ಅಸೋಸಿಯೇಶನ್ ಅಧ್ಯಕ್ಷ, ಕೊಕ್ಕೋ ಗುರು ಎಂ.ಡಿ. ಶಿವಶಂಕರ ಬೋನಂತಾಯ ಮಾತನಾಡಿ, ಕೈಗಾರಿಕೆಯಲ್ಲಿ ಪುತ್ತೂರು ಹಿಂದೆ ಬಿದ್ದಿದೆ. ಇದಕ್ಕೆ ಕಾರಣ ರಾಜಕೀಯವಾಗಿ ಗಮನ ನೀಡದೇ ಇರುವುದು. 1986ರಲ್ಲಿ ಆರಂಭಗೊಂಡ ಕೈಗಾರಿಕಾ ಪ್ರದೇಶದಲ್ಲಿ ಕೆಲವೇ ಕೆಲವು ಇಂಡಸ್ಟ್ರೀಸ್ ಗಳಿವೆ ಎಂದ ಅವರು, ದ.ಕ. ಜಿಲ್ಲೆ ಹಸಿರು ಪ್ರದೇಶವಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ದೊಡ್ಡ ಕೈಗಾರಿಕೆಗಳು ಬರುವುದು ಬೇಡ. ಅದಕ್ಕೆ ಅವಕಾಶ ನೀಡಬೇಡಿ ಎಂದು ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿದ ಅವರು, ಕೃಷಿಗೆ ಪೂರಕವಾದ ಸಣ್ಣ ಸಣ್ಣ ಇಂಡಸ್ಟ್ರೀಸ್ ಆದರೆ ಸಾಕು ಎಂದರು. ಜಾತಿ-ಮತ ಬೇಧವಿಲ್ಲದೆ ಮಾಡುವ ದಾನ ರಕ್ತದಾನ. ಸಂಸ್ಥೆಯ ಮಾಲಕರಾದ ಕೇಶವ ಅವರು ಇಂದು ರಕ್ತದಾನದಂತಹ ಶ್ರೇಷ್ಠ ಕಾರ್ಯ ಆಯೋಜನೆ ಮಾಡಿದ್ದಾರೆ. ಈ ಮೂಲಕ ಕೈಗಾರಿಕೋದ್ಯಮಿಗಳಿಗೆ ಮಾದರಿಯಾಗಿದ್ದಾರೆ. ಇಂತಹಾ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳೋಣ. ನಿಮ್ಮ ಕಾರ್ಯಗಳಿಗೆ ನಮ್ಮ ಬೆಂಬಲವಿದೆ ಎಂದರು.
ಸಮಾಜಮುಖಿ ಕಾರ್ಯಕ್ರಮ ಮೂಡಿಬರಲಿ: ಜೈರಾಜ್ ಭಂಡಾರಿ
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ರೋಟರಿ ಕ್ಲಬ್ನ ಸಕ್ರೀಯ ಸದಸ್ಯರಾದ ಕೇಶವರು ಕಳೆದ ಕೆಲವು ವರ್ಷಗಳಿಂದ ತಮ್ಮನ್ನು ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವಶ್ಯಕತೆಯಿದ್ದಾಗ ಯಾವುದೇ ಸಂಸ್ಥೆ ಅವರನ್ನು ಸಂಪರ್ಕಿಸಿದರೆ, ಮುಂದೆ ಬಂದು ತಮ್ಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇದೀಗ ತಮ್ಮ ಸಂಸ್ಥೆಯ ಬೆಳ್ಳಿಹಬ್ಬವನ್ನು ರಕ್ತದಾನದ ಮೂಲಕ ಆರಂಭಿಸಿ ಅರ್ಥಪೂರ್ಣಗೊಳಿಸಿದ್ದಾರೆ. ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ಸಂಸ್ಥೆಯಿಂದ ಮೂಡಿ ಬರಲಿ ಎಂದು ಹಾರೈಸಿದರು.
ಎಸ್.ಆರ್.ಕೆ.ಗೆ ಬ್ರೋಕ್ಲಿನ್ ಬ್ರಿಡ್ಜ್’ನ ಸಾಮ್ಯತೆ: ಸಾದಿಕ್ ಕುಂಬ್ರ
ಪುತ್ತೂರು ಆಕರ್ಷಣ್ ಇಂಡಸ್ಟ್ರೀಸ್’ನ ಸಾದಿಕ್ ಕುಂಬ್ರ ಮಾತನಾಡಿ, ಅಮೆರಿಕದ ಬ್ರೋಕ್ಲಿನ್ ಬ್ರಿಡ್ಜ್’ಗೆ ಎಸ್.ಆರ್.ಕೆ. ಲ್ಯಾಡರ್ಸ್ ಸಾಮ್ಯತೆ ಹೊಂದಿದೆ. ಬ್ರೋಕ್ಲಿನ್ ಬ್ರಿಡ್ಜ್ ಎರಡೂ ಊರುಗಳನ್ನು ಸಂಪರ್ಕಿಸುವುದು ಮಾತ್ರವಲ್ಲ, ಪ್ರವಾಸಿಗರ ತಾಣವಾಗಿಯೂ ಪ್ರಸಿದ್ಧಿಯಾಗಿದೆ. ವಿನ್ಯಾಸಗಾರ ತನ್ನ ಹೆಂಡತಿಗೆ ಸಂಜ್ಞೆಯನ್ನು ನೀಡಿ, ವಿನ್ಯಾಸವನ್ನು ಪೂರ್ಣಗೊಳಿಸಿದ ಇತಿಹಾಸ ಇದಕ್ಕಿದೆ. ಮುಂದೊಂದು ದಿನ ಎಸ್.ಆರ್.ಕೆ. ಲ್ಯಾಡರ್ಸ್ ಬ್ರೋಕ್ಲಿನ್ ಬ್ರಿಡ್ಜ್’ನಂತೆ ಹೆಸರುವಾಸಿಯಾಗಲಿ ಎಂದು ಶುಭಹಾರೈಸಿದ ಅವರು, ಕೃಷಿಕನ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಸುಮಾರು 30 ವಿವಿಧ ಏಣಿಗಳನ್ನು ಅನ್ವೇಷಿಸಿ ಯಶಸ್ವಿಯಾಗಿದೆ ಎಸ್.ಆರ್.ಕೆ. ರಾಜ್ಯದಲ್ಲಿ ಮಾತ್ರವಲ್ಲ ಪಕ್ಕದ ಕೇರಳದಲ್ಲೂ ಮನೆಮಾತಾಗಿರುವುದು ಕೇಶವ ಅಮೈ ಅವರ ಕಾರ್ಯವೈಖರಿಗೆ ಸಾಕ್ಷಿ ಎಂದರು.
ಚಿಕ್ಕ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದವರು: ಪ್ರಕಾಶ್ ಪೈ ಬಿ.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಕಾಶ್ ಪೈ ಬಿ. ಮಾತನಾಡಿ, ಮಾನಸಿಕವಾದ ಎಲ್ಲಾ ಕೊರತೆಗಳನ್ನು ಮೀರಿರುವ ಕೇಶವ್ ಅಮೈ ಅವರು, ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ತನ್ನ ದೂರದೃಷ್ಟಿತ್ವದಿಂದ ಕೃಷಿಕರಾಗಿ, ಕೃಷಿಕರ ಸಮಸ್ಯೆ ಪರಿಹಾರ ಮಾಡುವಲ್ಲಿ ಅತೀ ಚಿಕ್ಕ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದದ್ದು ಅಭಿನಂದನೀಯ. ತನ್ನ ಕ್ರಿಯಾಶೀಲ ವ್ಯಕ್ತಿತ್ವದಿಂದ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದು, ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿ. ಸಾಧನೆಗೆ ತುಡಿತದಲ್ಲಿರುವವರಿಗೆ ಎಸ್.ಆರ್.ಕೆ. ಲ್ಯಾಡರ್ಸ್’ನ ಕೇಶವ ಅಮೈ ಅವರೇ ಸ್ಫೂರ್ತಿ. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ವ್ಯಕ್ತಿತ್ವ ಅವರದ್ದಾಗಿದ್ದು, ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಅವರ ಮಾರ್ಗದರ್ಶನ ಪ್ರೇರಣೆ. ಎಸ್.ಆರ್.ಕೆ. ಲ್ಯಾಡರ್ಸ್ ಇನ್ನಷ್ಟು ದೊಡ್ಡ ಉದ್ಯಮವಾಗಿ ಬೆಳಗಲಿ. ಹೊಸ ಆವಿಷ್ಕಾರಗಳು ಕೈಗೂಡಲಿ. ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ಶುಭಹಾರೈಸಿದರು.
ಇದೇ ಸಂದರ್ಭ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಅವರು ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ಮಾಲತಿ ಕೇಶವ್ ಅಮೈ ಉಪಸ್ಥಿತರಿದ್ದರು.
ವಸಂತ ಸೇಡಿಯಾಪು, ನವೀನ್ ನಗರ, ಫಿಲೋಮಿನಾ, ಭರತ್ ಕುಮಾರ್, ನೀತಾ, ಮಾಧವ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಪ್ರತಿಭಾ, ಗಣೇಶ್, ಅಶೋಕ್, ದೀಕ್ಷಿತ್, ಶಶಿಧರ್, ಮನೋಜ್ ಕುಮಾರ್, ಮನೋಜ್ ಬಿ. ಅತಿಥಿಗಳಿಗೆ ಸ್ಮರಣಿಕೆ ನೀಡಿದರು.
ಎಸ್.ಆರ್.ಕೆ. ಲ್ಯಾಡರ್ಸ್’ನ ಮಾಲಕ ಕೇಶವ ಅಮೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಿಬ್ಬಂದಿ ರಕ್ಷಿತ್ ಆಚಾರ್ಯ ವಂದಿಸಿದರು. ಗಣೇಶ್ ಎನ್. ಕಲ್ಲರ್ಪೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ರಕ್ತದಾನ ಶಿಬಿರ ನಡೆದಿದ್ದು, 45 ಯೂನಿಟ್ ರಕ್ತ ಸಂಗ್ರಹವಾಯಿತು.