ಯುವತಿ ಹೊಟ್ಟೆಯಲ್ಲಿ ಇಲಿ ಪಾಷಾಣದ ಅಂಶ ಪತ್ತೆ
ಕಾಸರಗೋಡು: ಕಾಸರಗೋಡಿನ ಅಡ್ಕತ್ತಬೈಲಿನ 19 ವರ್ಷದ ಅಂಜುಶ್ರೀ ಪಾರ್ವತಿ ಎಂಬ ಯುವತಿ ಬಿರಿಯಾನಿ ತಿಂದು ಮೃತಪಟ್ಟಿರುವ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಆಕೆ ಆತ್ಮಹತ್ಯೆಗೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂಬುದು ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿಯಿಂದ ಬಹಿರಂಗಗೊಂಡಿದೆ.
ಪರಿಯಾರಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಆಕೆಯ ಸಾವು ವಿಷಾಹಾರದಿಂದ ಸಂಭವಿಸಿಲ್ಲ. ಇಲಿ ಪಾಷಾಣ ಪೇಸ್ಟ್ ಬಾಲಕಿಯ ಯಕೃತ್ತಿನ ಮೇಲೆ ಪರಿಣಾಮ ಬೀರಿದ್ದು, ಆಕೆಯ ಸಾವಿಗೆ ಕಾರಣವಾಯಿತು ಎಂದು ವರದಿ ನೀಡಿದ್ದಾರೆ.
ರಾಸಾಯನಿಕ ಪರೀಕ್ಷೆಯ ಫಲಿತಾಂಶ ಬಂದ ನಂತರವೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯ. ಆತ್ಮಹತ್ಯೆಯ ಸಾಧ್ಯತೆಯ ಸುಳಿವು ನೀಡಿದ ಡಿಜಿಟಲ್ ಮತ್ತು ಸಾಕ್ಷ್ಯಚಿತ್ರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಆತ್ಮಹತ್ಯೆಯ ಸಾಧ್ಯತೆಯನ್ನು ಕುಟುಂಬಸ್ಥರು ತಳ್ಳಿಹಾಕಿದ್ದರೂ, ಅಂಜುಶ್ರೀ ಇತ್ತೀಚೆಗೆ ಇಲಿ ಪಾಷಾಣಕ್ಕಾಗಿ ಹುಡುಕಾಟ ನಡೆಸಿದ್ದಾಳೆ ಎಂದು ಅವರ ಫೋನ್ ದಾಖಲೆಗಳು ತೋರಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ. ಸೈಬರ್ ಸೆಲ್ ಬೆಂಬಲದೊಂದಿಗೆ ಅಂಜುಶ್ರೀ ಅವರ ಮೊಬೈಲ್ ಫೋನ್ ಪರಿಶೀಲಿಸಿದ್ದಾರೆ. ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಲು ರಾಸಾಯನಿಕ ಪರೀಕ್ಷೆಯ ಫಲಿತಾಂಶಗಳನ್ನು ಮತ್ತು ಆಂತರಿಕ ಅಂಗಗಳಿಂದ ಸಂಗ್ರಹಿಸಲಾದ ಮಾದರಿಗಳನ್ನು ನಿರೀಕ್ಷಿಸುತ್ತಿದ್ದಾರೆ.
ಡಿಸೆಂಬರ್ 31ರಂದು ಅಂಜುಶ್ರೀ ಮತ್ತು ಅವರ ಕುಟುಂಬ ಸದಸ್ಯರು ಕಾಸರಗೋಡಿನ ರೆಸ್ಟೋರೆಂಟ್‌ನಲ್ಲಿ ‘ಕುಜಿಮಂತಿ’ ಎಂಬ ಕೇರಳದ ವಿಶೇಷ ಬಿರಿಯಾನಿ ಮತ್ತು ಚಿಕನ್ 65 ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಇದನ್ನು ಸೇವಿಸಿದ ಬಳಿಕ ಅಂಜುಶ್ರೀಗೆ ಸಮಸ್ಯೆ ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಹದಗೆಟ್ಟ ನಂತರ, ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಆಕೆ ಶನಿವಾರ ಬೆಳಿಗ್ಗೆ 5.15ರ ಸುಮಾರಿಗೆ ಮೃತಪಟ್ಟಿದ್ದರು.