ವ್ಯಕ್ತಿಯೊಬ್ಬನಿಗೆ ಥಳಿಸಿ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಸಂಬಂಧ ಒಟ್ಟು ನಾಲ್ವರನ್ನು ಬಂಧಿಸಿರುವ ಘಟನೆ ಮೀರತ್’ನಲ್ಲಿ ನಡೆದಿದೆ.
ವಿಡಿಯೋ ಶೇರ್ ಮಾಡಿದ್ದಕ್ಕಾಗಿ ನಿನ್ನೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ನವೆಂಬರ್ 13ರಂದು ಘಟನೆ ನಡೆದಿದ್ದು ಯುವಕರ ಗುಂಪೊಂದು ವಿದ್ಯಾರ್ಥಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ ಆ ಬಳಿಕ ವಿದ್ಯಾರ್ಥಿಯ ಮುಖದ ಮೇಲೆ ಓರ್ವ ಮೂತ್ರ ವಿಸರ್ಜನೆ ಮಾಡಿ ಅಮಾನುಷವಾಗಿ ವರ್ತಿಸಿದ್ದಾನೆ. ಇಷ್ಟೆಲ್ಲಾ ಘಟನೆ ನಡೆದಿರುವುದನ್ನು ಗುಂಪಿನ ಓರ್ವ ಸದಸ್ಯ ಚಿತ್ರೀಕರಿಸಿದ್ದಾನೆ.
ಹಲ್ಲೆ ಮಾಡಬೇಡಿ ಎಂದು ಯುವಕ ಎಷ್ಟೇ ಬೇಡಿಕೊಂಡರೂ ಆರೋಪಿಗಳು ಕೇಳಲಿಲ್ಲ. ವಿದ್ಯಾರ್ಥಿಯ ತಲೆ ಮತ್ತು ಬೆನ್ನಿಗೆ ಮನಬಂದಂತೆ ಥಳಿಸಿದ್ದಾರೆ. ಮತ್ತೊಬ್ಬ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಸಮೀಪದಲ್ಲಿದ್ದ ಕೆಲವು ಸ್ನೇಹಿತರು ಈ ಭಯಾನಕ ದೃಶ್ಯಗಳನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಗುಂಪಿನಲ್ಲಿದ್ದ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಯುವಕನ ಮೇಲೆ ಹಲ್ಲೆ ನಡೆಸಿ ಮೂತ್ರ ವಿಸರ್ಜನೆ ಮಾಡಲಾಗಿದೆ ಎಂದು ತಂದೆ ನೀಡಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಿಯೂಷ್ ಸಿಂಗ್ ತಿಳಿಸಿದ್ದಾರೆ.
ಸಂಬಂಧಿಕರ ಮನೆಯಿಂದ ವಾಪಸ್ಸಾಗುತ್ತಿದ್ದ ವೇಳೆ ನಿರ್ಜನ ಸ್ಥಳದಲ್ಲಿ ಮಗನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ ಎಂದು ತಂದೆ ದುಃಖ ವ್ಯಕ್ತಪಡಿಸಿದರು. ಮಗ ವಾಪಸ್ ಬಾರದ ಕಾರಣ ರಾತ್ರಿಯಿಡೀ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಮರುದಿನ ಬೆಳಗ್ಗೆ ಸಂತ್ರಸ್ತೆ ಮನೆಗೆ ಬಂದು ನಡೆದ ಘಟನೆಯನ್ನು ವಿವರಿಸಿದ್ದಾನೆ.
ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ತಂದೆ ಆರೋಪಿಸಿದ್ದಾರೆ. 3 ದಿನದ ಬಳಿಕ ವಿಡಿಯೋ ವೈರಲ್ ಆಗಿದೆ. ಹಲ್ಲೆ ನಡೆಸಿದವರಲ್ಲಿ ಕೆಲವರು ಸ್ನೇಹಿತರಾಗಿದ್ದು, ಅವರ ನಡುವೆ ಯಾವುದೇ ವಿವಾದ ಇರಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.