ಪುತ್ತೂರು: ಅಯೋಧ್ಯೆಯಿಂದ ಅಕ್ಷತೆ ಹೊತ್ತ ರಥ ಪುತ್ತೂರನ್ನು ಸೋಮವಾರ ಪ್ರವೇಶಿಸಿತು.
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ. 22ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ಏಕಕಾಲದಲ್ಲಿ ನಡೆಯುವ ಅಕ್ಷತೆ ವಿತರಣೆ ಕಾರ್ಯಕ್ರಮದ ಅಂಗವಾಗಿ ರಥ ಹೊರಟಿದೆ.
ರಥ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ ಮೂಲಕ ಆಗಮಿಸಿತು. ಈ ಸಂದರ್ಭದಲ್ಲಿ ಅಕ್ಷತೆ ಹೊತ್ತ ರಥವನ್ನು ಕಳಶ ಹಿಡಿದ ಮಹಿಳೆಯರು ಚೆಂಡೆ, ವಾದ್ಯಗಳ ಮೂಲಕ ಸ್ವಾಗತಿಸಿದರು.
ಬಳಿಕ ಅಕ್ಷತೆ ತುಂಬಿದ ಕಲಶವನ್ನು ಮೆರವಣಿಗೆ ಮೂಲಕ ದೇವಸ್ಥಾನದ ಹೊರಾಂಗಣದಲ್ಲಿ ಸುತ್ತು ಬಂದು ದೇವಸ್ಥಾನದ ಒಳಾಂಗಣಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಗರ್ಭಗುಡಿಯಲ್ಲಿ ಅಕ್ಷತೆಯನ್ನಿರಿಸಿ ಪ್ರಾರ್ಥನೆ ಮೂಲಕ ಪೂಜೆ ನೆರವೇರಿಸಲಾಯಿತು. ಬಳಿಕ ಅಕ್ಷತೆಯನ್ನು ಪಾವಿತ್ರ್ಯತೆಯೊಂದಿಗೆ ಇರಿಸಲಾಯಿತು.
ಅಕ್ಷತೆಯನ್ನು ಪ್ರತೀ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮನೆ ಮನೆ ಸಂಪರ್ಕ ಅಭಿಯಾನ ಜ. 1 ರಿಂದ 15 ರ ತನಕ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಹಿಂದುವಿನ ಮನೆಗೆ ಈ ಅಕ್ಷತೆಯನ್ನು ಸಂಪರ್ಕ ಅಭಿಯಾನದ ಮೂಲಕ ತಲುಪಿಸಲಾಗುವುದು. ಜ. 7 ರಂದು ಸಂಪರ್ಕ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಮಹಾಸಂಪರ್ಕ ಅಭಿಯಾನ ನಡೆಯಲಿದೆ.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸಮಿತಿ ಸದಸ್ಯರು, ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಮಿತಿ ಸಂಯೋಜಕ್ ರವೀಂದ್ರ ಪಿ., ಸಂಚಾಲಕ ಡಾ. ಕೃಷ್ಣ ಪ್ರಸನ್ನ ಸೇರಿದಂತೆ ಮತ್ತಿತರ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.