ಮಂಗಳೂರು: ಈಗಲೇ ಶೇ. 80ರಷ್ಟು ಬೋಟುಗಳು ಸಮುದ್ರ ದಡದಲ್ಲಿ ಲಂಗರು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಸಮುದ್ರದಲ್ಲಿ ಹಿಂದೆಂದೂ ಕಂಡು ಕೇಳರಿಯದ ಮತ್ಸ್ಯಕ್ಷಾಮ ಉಂಟಾಗಿರುವುದೇ ಇದಕ್ಕೆ ಕಾರಣ.
ಸಮುದ್ರದಲ್ಲಿ ಮೀನಿನ ಬರ ಎದುರಾಗಿದೆ. ತೀವ್ರ ಮೀನಿನ ಕೊರತೆಯಿಂದಾಗಿ ಮೀನುಗಾರರು ಕಂಗಾಲಾಗಿದ್ದಾರೆ. ಮೀನುಗಾರಿಕೆ ಆರಂಭವಾಗಿ ಮೂರು ತಿಂಗಳಾಗಿದೆಯಷ್ಟೆ. ಅಷ್ಟರಲ್ಲಿ ಕರಾವಳಿಯ ಸಮುದ್ರದಲ್ಲಿ ಮತ್ಸ್ಯಕ್ಷಾಮದ ಭೀತಿ ಎದುರಾಗಿದ್ದು, ಮೀನುಗಾರಿಕೆಯ ಖರ್ಚುವೆಚ್ಚ ಸರಿದೂಗಿಸಲು ಸಾಧ್ಯವಾಗದೆ ಬೋಟುಗಳು ಅವಧಿಗೆ ಮುನ್ನವೇ ಕಡಲ ಕಿನಾರೆಯಲ್ಲಿ ಲಂಗರು ಹಾಕಲು ಆರಂಭಿಸಿವೆ. ಕಳೆದೊಂದು ತಿಂಗಳಿನಿಂದ ಪರ್ಸಿನ್ ಬೋಟ್‌ಗಳು ಸಮುದ್ರಕ್ಕಿಳಿಯುತ್ತಿಲ್ಲ.
ಮತ್ಸ್ಯಕ್ಷಾಮಕ್ಕೆ ಪ್ರಮುಖ ಕಾರಣ ಹವಾಮಾನ ವೈಪರೀತ್ಯ ಎನ್ನಲಾಗುತ್ತಿದೆ. ಈ ಬಾರಿ ಮಳೆಗಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಕಾಲ. ಈ ವೇಳೆ ಮಳೆನೀರಿನೊಂದಿಗೆ ಆಹಾರವೂ ಸಮುದ್ರ ಸೇರುತ್ತದೆ. ಆದರೆ ಮುಂಗಾರು ಕ್ಷೀಣಗೊಂಡಿದ್ದಲ್ಲದೆ, ಮೀನು ಸಂತತಿ ದಡದ ಬಳಿಗೆ ಬರಲು ಪೂರಕವಾಗುವಂತೆ ಸಮುದ್ರ ಮಥನವಾಗದಿರುವುದು ಮತ್ಸ್ಯಕ್ಷಾಮಕ್ಕೆ ಕಾರಣವಾಗಿದೆ.
ಕೈಗಾರಿಕೆಗಳ ಕಲುಷಿತ ನೀರು ಸೇರಿದಂತೆ ಹಲವಾರು ಕಾರಣಗಳಿಂದ ಸಮುದ್ರ ಮಲಿನವಾಗುತ್ತಿದೆ. ಅಲ್ಲದೆ ಅವೈಜ್ಞಾನಿಕ ಮೀನುಗಾರಿಕೆಯು ಮತ್ತ್ಯಕ್ಷಾಮಕ್ಕೆ ಕಾರಣವಾಗುತ್ತಿದೆ. ಜೂನ್, ಜುಲೈನಲ್ಲಿ ಎರಡು ತಿಂಗಳ ಆಳ ಸಮುದ್ರ ಮೀನುಗಾರಿಕೆ ಸ್ಥಗಿತದ ಬಳಿಕ ಆಗಸ್ಟ್‌ನಿಂದ ಮೀನು ಹೇರಳವಾಗಿ ಸಿಗುವ ಕಾಲ. ಅದರಲ್ಲೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಯಥೇಚ್ಛವಾಗಿ ಮೀನುಗಳು ಸಿಗುವ ಸಮಯ. ಆದರೆ ಈ ಅವಧಿಯಲ್ಲೇ ಮತ್ಸ್ಯಕ್ಷಾಮ ಎದುರಾಗಿರುವುದು ಮೀನುಗಾರರಲ್ಲಿ ಮಾತ್ರವಲ್ಲದೆ, ಮೀನುಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳನ್ನು ಆತಂಕಕ್ಕೆ ತಳ್ಳಿದೆ.
ಈ ಬಾರಿ ಮೀನುಗಾರಿಕಾ ಋತು ಆರಂಭಗೊಂಡಾಗ ಮೀನುಗಾರರು ಮಂಜುಗಡ್ಡೆ ಸಮಸ್ಯೆಯನ್ನು ಎದುರಿಸಿದ್ದರು. ಈಗ ಒಂದು ತಿಂಗಳಿನಿಂದ ಬೋಟ್‌ಗಳು ಸಾಕಷ್ಟು ಮೀನು ಸಿಗದೆ ವಾಪಸಾಗುತ್ತಿವೆ. ಅಲ್ಲದೆ ರಫ್ತಾಗುವ ಮಾಂಜಿ, ಅಂಜಲ್, ಮದಿಮಾಲ್ ಮೀನುಗಳ ಕೊರತೆಯಿಂದ ಮೀನುಗಾರರ ಜೇಬು ತುಂಬುತ್ತಿಲ್ಲ. ಇದರಿಂದ ದೋಣಿಗಳನ್ನು ಸಮುದ್ರಕ್ಕಿಳಿಸಲು ದೋಣಿ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಬೋಟ್‌ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಊದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಸೀಸನ್ ಕಾಲದಲ್ಲಿಯೇ ಮತ್ಸ್ಯಕ್ಷಾಮ ಉಂಟಾಗಿ ಬೋಟ್‌ಗಳು ಅವಧಿಗೆ ಮುನ್ನವೇ ಲಂಗರು ಹಾಕಿದ್ದು, ಬೋಟ್ ಮಾಲಕರು, ಕಾರ್ಮಿಕರನ್ನು ಕಂಗೆಡುವಂತೆ ಮಾಡಿದೆ. ಮೀನುಗಾರಿಕೆಯನ್ನೇ ನಂಬಿ ಜೀವನ ಮಾಡುತ್ತಿದ್ದ ಕಡಲ ಮಕ್ಕಳು ಅತಂತ್ರರಾಗಿದ್ದಾರೆ. ಕರಾವಳಿಯ ಆರ್ಥಿಕತೆಯ ಜೀವನಾಡಿಯಾದ ಮತ್ಸ್ಯೋದ್ಯಮ ಕುಸಿದಿದೆ.