ಪುತ್ತೂರು: ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಕನ್ನಡ ಸಾಹಿತ್ಯದ ಸಂಭ್ರಮ ನಡೆಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಒಲವು-ಅರಿವು ಮೂಡಿಸುವ ಕೆಲಸ ಅತ್ಯಂತ ಶ್ಲಾಘನೀಯ. ಕನ್ನಡ ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಮಕ್ಕಳು ಸಾಹಿತ್ಯದ ಊರುಗೋಲುಗಳಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕನ್ನಡ ಹೋರಾಟ ಎಂಬ ದಂಧೆಯನ್ನು ನಡೆಸುವ ಮಂದಿಗಳ ವಿರುದ್ಧ ಜಾಗೃತವಾಗಬೇಕಾಗಿದೆ ಎಂದು ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ಪಿ.ಎನ್ ನೆಕ್ಕರಾಜೆ ಅಭಿಪ್ರಾಯಪಟ್ಟರು.
ಬಜತ್ತೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಸಾಹಿತ್ಯದ ನಡೆ ಗ್ರಾಮದ ಕಡೆ ‘ಗ್ರಾಮ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು, ಇದು ವಿಶ್ವದಾದ್ಯಂತ ಮನ್ನಣೆ ಪಡೆದುಕೊಂಡಿದೆ. ಆದರೆ ಇಂದಿನ ಯುವಜನತೆ ಕನ್ನಡ ಸಂಸ್ಕೃತಿ ಸಾಹಿತ್ಯದತ್ತ ಹೆಚ್ಚಿನ ಒಲವು ಹೊಂದಿಲ್ಲ. ಈ ಹಿನ್ನಲೆಯಲ್ಲಿ ಗ್ರಾಮಗಳಲ್ಲಿ ಇಂತಹ ಕ್ರೀಯಾತ್ಮಕ ಚಟುವಟಿಕೆಗಳ ಮೂಲಕ ಮತ್ತೆ ಕನ್ನಡ ಸಾಹಿತ್ಯವನ್ನು ಜನಮನದಲ್ಲಿ ಬಿತ್ತುವ, ಮಕ್ಕಳಲ್ಲಿ ಓದುವ ಗೀಳು ಹುಟ್ಟುಹಾಕುವ ಕೆಲಸ ಅರ್ಥಪೂರ್ಣ ಎಂದರು.
ಬಜತ್ತೂರು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಕೆ.ವಿ ಮಾತನಾಡಿ, ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಗಳ ಮೂಲಕ ಪ್ರತೀ ಮಗುವೂ ಓದುವ ಅಭ್ಯಾಸ ಮಾಡಿಕೊಂಡರೆ ಮಕ್ಕಳ ಮಕ್ಕಳ ಕೈಯಲ್ಲಿ ಮೊಬೈಲ್ ಗೆ ಬದಲು ಕನ್ನಡದ ಪುಸ್ತಕಗಳಿರುತ್ತವೆ. ಇಂತಹ ಸಮಯ ಶ್ರೀಘ್ರದಲ್ಲಿ ಬರಲಿ ಎಂದರು.
ಹಿರಿಯ ಪತ್ರಕರ್ತ ಉದಯಕುಮಾರ್ ಯು.ಎಲ್ ಮಾತನಾಡಿ, ಸಾಹಿತ್ಯ ಕಾರ್ಯಕ್ರಮದ ಫಲಶೃತಿ ಗ್ರಾಮೀಣ ಭಾಗದ ಮಕ್ಕಳ ಸಾಹಿತ್ಯ ಅಭ್ಯುದಯ ಮೂಲಕ ಕಾಣಿಸಿಕೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಯುವ ಉದ್ಯಮಿ ರಾಧಾಕೃಷ್ಣ ಕುವೆಚ್ಚಾರ್, ಇದೊಂದು ಕನ್ನಡಕ್ಕೆ ಕೊಡುಗೆ ನೀಡುವ ಕಾರ್ಯಕ್ರಮ. ಕನ್ನಡ ಸಾಹಿತ್ಯವನ್ನು ಜನರ ನಡುವೆ ಬಿತ್ತುವ ಕಾರ್ಯಕ್ರಮ. ಇದರ ಜತೆಗೆ ಸಾಧಕರನ್ನು ನಾಡಿಗೆ ಪರಿಚಯಿಸುವ ಕಾರ್ಯಕ್ರಮ. ಪ್ರಸ್ತುತ ದಶ ಸಂಭ್ರಮದಲ್ಲಿರುವ ಈ ಗ್ರಾಮ ಸಾಹಿತ್ಯ ಸಂಭ್ರಮ ನಾಡಿನ ಎಲ್ಲೆಡೆ ನಿರಂತರವಾಗಿ ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಅವರು ಮಾತನಾಡಿ. ಈ ಸಾಹಿತ್ಯ ಸಂಭ್ರಮ ನಿರಂತರವಾಗಿದ್ದು, 22 ಗ್ರಾಪಂಗಳ 32 ಗ್ರಾಮಗಳಲ್ಲಿಯೂ ನಡೆಯಲಿದೆ. ಈ ತನಕ 1425 ಮಕ್ಕಳಿಗೆ ವೇದಿಕೆ ಕಲ್ಪಿಸಲಾಗಿದೆ. ಇದೊಂದು ಕನ್ನಡ ಸಾಹಿತ್ಯದ ಜಾಗೃತಿ ಕಾರ್ಯಕ್ರಮ ಎಂದರು.
ಸಾಧಕರಿಗೆ ಸನ್ಮಾನ:
ಹಿರಿಯ ಸಾಹಿತಿ ವಿಲ್ಫ್ರೆಡ್ ಡಿಸೋಜ ಸಮತಾ ಮುದ್ಯ, ಪತ್ರಿಕಾ ಮಾದ್ಯಮದ ಸೇವೆಗಾಗಿ ಮೇಘಾ ಪಾಲೆತ್ತಾಡಿ, ಹರೀಶ್ ಬಾರಿಂಜ, ಯುವ ಸಾಹಿತಿ ಜಗದೀಶ್ ಬಾರಿಕೆ, ಶೋಭಾನೆ ಹಾಡುಗಾರ್ತಿ ಪ್ರೇಮಾ ಬಾರಿಕೆ ಹಾಗೂ ಕಾಂಚನ ಲಕ್ಷ್ಮೀನಾರಾಯಣ ಅನುದಾನಿತ ಶಾಲಾ ಶಿಕ್ಷಕರನ್ನು ರಾಧಾಕೃಷ್ಣ ಕುವೆಚ್ಚಾರ್ ಅವರನ್ನು ಸನ್ಮಾನಿಸಲಾಯಿತು. ಬಜತ್ತೂರು ರಿಕ್ಷಾ ಚಾಲಕ ಮನೋಜ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಹಿರಿಯ ಸಾಹಿತಿ ವಿಲ್ಫ್ರೆಡ್ ಡಿಸೋಜ ಸಮತಾ ಮುದ್ಯ ಮಾತನಾಡಿದರು.
ವೇದಿಕೆಯಲ್ಲಿ ಬಜತ್ತೂರು ಗ್ರಾಪಂ ಉಪಾಧ್ಯಕ್ಷೆ ವಿಮಲಾ ಭರತ್ ಮತ್ತು ಸಂಯೋಜಕ ನಾರಾಯಣ ಕುಂಬ್ರ ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕ ಚಕ್ರಪಾಣಿ ಸ್ವಾಗತಿಸಿದರು. ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿದರು. ಜಗದೀಶ್ ಬಾರಿಕೆ ಕಾರ್ಯಕ್ರಮನಿರೂಪಿಸಿದರು.