ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿ ಕ್ರೀಡೆ ಕಂಬಳವನ್ನು ಆಯೋಜನೆ ಮಾಡಲಾಗಿದ್ದು ಕಂಬಳಕ್ಕೆ ಮಳೆ ತಂಪೆರೆದಿದೆ.
ಕಂಬಳ ಆಯೋಜನೆ ವೇಳೆ ಜಿಟಿ ಜಿಟಿ ಮಳೆಯಾಗಿತ್ತು. ಮಧ್ಯಾಹ್ನ ಏಕಾಏಕಿ ಸುರಿದ ಗಾಳಿ ಮಳೆಗೆ ಬಯಲ️ಲ್ಲಿ ನಿಂತಿದ್ದ ಜನತೆ ರಕ್ಷಣೆಗೆ ಓಡಿದರು. ಮಳೆ ಬಂದರೂ ಕಂಬಳ ಕೂಟ ಮಾತ್ರ ಸರಾಗವಾಗಿ ನಡೆಯುತ್ತಿದೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ಪಂದ್ಯಾವಳಿಯನ್ನು ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ಸಂಚಾರಿ ಪೊಲೀಸರು, ಸಾರ್ವಜನಿಕರು ಕಟ್ಟುನಿಟ್ಟಾಗಿ ಟ್ರಾಫಿಕ್ ನಿಯಮ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನು ಕಂಬಳ ವೀಕ್ಷಣೆಗೆ ಬರುವ ಜನರು ಗೇಟ್ ನಂಬರ್ 1, 2, 3 ಹಾಗೂ 4ರ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗಿದೆ.
ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳು ಫನ್ ವರ್ಲ್ಡ್ ಕಡೆಯಿಂದ ಪ್ರವೇಶಿಸಬೇಕು. ಯಾವುದೇ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬಳ ಮೈದಾನಕ್ಕೆ ಆಗಮಿಸಲಿದ್ದಾರೆ.
ಕರಾವಳಿ ಕಂಬಳ ಉತ್ಸವಕ್ಕೆ ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ನಟ ದರ್ಶನ್, ಕಾಂತಾರ ಹೀರೋ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಉಪೇಂದ್ರ, ಶಿವಣ್ಣ, ವಿವೇಕ್ ಒಬೆರಾಯ್, ಆಶಿಶ್ ಬಲ್ಲಾಳ್, ರಾಜ್ ಬಿ. ಶೆಟ್ಟಿ, ಮೇಘಾ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗುತ್ತಿದ್ದಾರೆ.