ಬೆಂಗಳೂರು: ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಕರಾವಳಿಯ ಗ್ರಾಮೀಣ ಸೊಗಡು ಕಂಬಳ ರಾಜಧಾನಿಗೆ ತಲುಪಿದೆ. ಬೆಂಗಳೂರಿನಲ್ಲಿರುವ ಕರಾವಳಿಗರು ಹಾಗೂ ಕಂಬಳವನ್ನು ಮೊದಲ ಬಾರಿಗೆ ನೋಡುತ್ತಿರುವ ಹೊರ ಊರಿಗರಿಗೆ ಬೆಂಗಳೂರು ಕಂಬಳ ಹಬ್ಬವಾಗಿ ಮೂಡಿಬರುತ್ತಿದೆ.
ಬೆಳಿಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮವನ್ನು ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು. ರಾಜ ಮಹರಾಜ ಹೆಸರಿನ ಕಂಬಳ ಕರೆಗೆ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಂಸದ ಸದಾನಂದ ಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಆರ್.ವಿಶ್ವನಾಥ್, ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಉಮೇಶ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾದರು.
ಬಳಿಕ ರಾಜ – ಮಹಾರಾಜ ಕರೆಯಲ್ಲಿ ಒಂದರ ಹಿಂದೊಂದರಂತೆ ಕೋಣಗಳನ್ನು ಬಿಡಲಾಗುತ್ತಿದೆ. ತುಳು ಹಾಗೂ ಕನ್ನಡ ಎರಡೂ ಭಾಷೆಯ ಹಾಸ್ಯಮಿಶ್ರಿತ ನಿರೂಪಣೆ ಕಂಬಳದ ಮೆರುಗನ್ನು ಹೆಚ್ಚುಗೊಳಿಸಿದೆ.