ಪುತ್ತೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪುತ್ತೂರು ತಾಲೂಕು ಸಮಿತಿ ಇಲ್ಲಿನ ಅಮರ್ ಜವಾನ್ ಸ್ಮಾರಕದ ಬಳಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು.
ಆಶಾ ಕಾರ್ಯಕರ್ತೆಯರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹ ಧನವನ್ನು ಆರ್ ಸಿಎಚ್ ಪೋರ್ಟಲ್ ನಿಂದ ಕೈಬಿಡಬೇಕು, ಕನಿಷ್ಠ 15 ಸಾವಿರ ರೂ. ವೇತನ ನೀಡಬೇಕು ಮೊದಲಾದ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಗೆ ಮೊದಲು ನಗರದ ಖಾಸಗಿ ಬಸ್ ನಿಲ್ದಾಣದಿಂದ ಆಶಾ ಕಾರ್ಯಕರ್ತೆಯರು ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಪ್ರತಿಭಟನಾ ಸ್ಥಳಕ್ಕೆ ತೆರಳಿದರು.
ಎಐಯುಟಿಯುಸಿ ರಾಜ್ಯ ಖಜಾಂಚಿ ಸಂಧ್ಯಾ ಮಾತನಾಡಿ, ಕಳೆದ 15 ವರ್ಷಗಳಿಂದ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯ ವಿವಿಧ ಯೋಜನೆಯಡಿ ದುಡಿಸಲಾಗುತ್ತಿದೆ. ಅಲ್ಲದೆ ಜಾಗತಿಕ ಆರೋಗ್ಯ ಗ್ಲೋಬಲ್ ಲೀಡರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಒಟ್ಟಾರೆಯಾಗಿ ಪ್ರತಿಯೊಂದು ಸರ್ವೆ ಕಾರ್ಯಕ್ಕೂ ಆಶಾ ಕಾರ್ಯಕರ್ತೆಯರನ್ನು ಬಳಸಲಾಗುತ್ತಿದೆ. ಇಷ್ಟೆಲ್ಲಾ ಕೆಲಸ ನಡೆಸಿದರೂ ಸರಿಯಾದ ವೇತನ ನೀಡುತ್ತಿಲ್ಲ. ಬಿಟ್ಟಿ ಕೆಲಸ ನಮಗೆ ಬೇಡ ಎಂದು ತಿಳಿಸಿದ ಅವರು, ತಕ್ಷಣ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 15 ಸಾವಿರ ರೂ. ವೇತನ ನೀಡಬೇಕು. ಆರ್ ಸಿಎಚ್ ಪೋರ್ಟಲಿನಿಂದ ಕೈಬಿಡಬೇಕು, ಮೊಬೈಲ್ ಡಾಟಾ ನೀಡದೇ ಮೊಬೈಲ್ ಮೂಲಕ ವಿವಿಧ ಚಟುವಟಿಕೆಗಳನ್ನು ಮಾಡಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು, ಎರಡು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದುಕೊರತೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ ಮಾತನಾಡಿ, ವೇತನ ನಿಗದಿಪಡಿಸದೆ ಆಶಾ ಕಾರ್ಯಕರ್ತೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ವೇತನಕ್ಕಾಗಿ ಈಗಾಗಲೇ ಹಲವಾರು ಬಾರಿ ಮನವಿ ನೀಡಿದ್ದೇವೆ. ಆದರೆ ಯಾವುದೇ ಸರಕಾರ ನಮಗೆ ಸ್ಪಂದಿಸುತ್ತಿಲ್ಲ. ನಮ್ಮ ಬೇಡಿಕೆ ಈಡೇರುವ ತನಕ ಬಿಟ್ಟಿ ಚಾಕರಿ ಮಾಡಲು ಸಿದ್ಧರಿಲ್ಲ ಎಂದು ತಿಳಿಸಿದರು.
ಬಳಿಕ ವಿವಿಧ ಬೇಡಿಕೆಗಳ ಮನವಿಯನ್ನು ಪುತ್ತೂರು ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಹರಿಣಿ, ತಾಲೂಕು ಕಾರ್ಯದರ್ಶಿ ಚಿತ್ರಾ ಕೆ. ಮತ್ತಿತರರು ಉಪಸ್ಥಿತರಿದ್ದರು.