ಪುತ್ತೂರು: ತೀರಾ ಕುಗ್ರಾಮವಾಗಿದ್ದ ಬಲೆರಾವು, ಆಧುನಿಕ ಜಗತ್ತಿಗೆ ತೆರೆದುಕೊಳ್ಳತೊಡಗಿದೆ. ಮುಂದೊಂದು ದಿನ ಇದು ತಾಲೂಕಿನ ಪ್ರಮುಖ ಪ್ರದೇಶವಾಗಿ ಬೆಳೆದರೂ ಅಚ್ಚರಿಪಡಬೇಕಾಗಿಲ್ಲ. ಇದಕ್ಕೆಲ್ಲಾ ಕಾರಣ, ಒಂದು ರಸ್ತೆ ಹಾಗೂ ಒಂದು ಸೇತುವೆ ಸಹಿತ ಕಿಂಡಿಅಣೆಕಟ್ಟು.
ಹೌದು! ಹೆಸರಿಗೆ ತಕ್ಕಂತೆ ಬಲೆರಾವು – ಬಲ್ಲೆಗಳೇ ತುಂಬಿದ್ದ ಊರು. ತುಳುವಿನಲ್ಲಿ ಹೇಳಬೇಕೆಂದರೆ – “ರಾವು ಕುಟ್ಟುದು ಬಲ್ಲೆ ಜಿಂಜಿನ ಊರು”.
ಇದೊಂದು ಸಾಲು ಸಾಕು, ಬಲೆರಾವು ಪ್ರದೇಶದ ಚಿತ್ರಣ ನಿಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಲು. ಸರಿಯಾದ ರಸ್ತೆಯೇ ಇರದಂತಹ ಸಣ್ಣ ಪ್ರದೇಶವಿದು. ಆದ್ದರಿಂದ ಅಭಿವೃದ್ಧಿಯ ಕನಸು ಕಂಡು, ನನಸಾಗದು ಎಂಬ ನೋವಿನಲ್ಲಿ ತಣ್ಣಗೆ ಮಲಗಿತ್ತು.
100 ಮೀಟರ್ ದೂರದಲ್ಲಿ ಕುಮಾರಧಾರ ನದಿ ವಿಸ್ತಾರವಾಗಿ ಹರಡಿದ್ದು, ಇದಕ್ಕೆ ಸೇರುವ ಗೌರಿ ಹೊಳೆ ಇದೇ ಬಲೆರಾವು ಪ್ರದೇಶವನ್ನು ಸೀಳಿಕೊಂಡು ಮುಂದಡಿ ಇಡುತ್ತದೆ. ಈ ಹೊಳೆಗೆ ಕಿಂಡಿಅಣೆಕಟ್ಟು ಕಟ್ಟಬೇಕು ಎಂಬ ಪ್ರಸ್ತಾಪವೇ, ಇಂದು ಇಡೀಯ ಪ್ರದೇಶದ ಚಿತ್ರಣವನ್ನು ಬದಲಿಸುವಂತೆ ಮಾಡಿದೆ.
ಶಾಸಕ ಸಂಜೀವ ಮಠಂದೂರು ಅವರ ಮುಂದೆ ಕಿಂಡಿಅಣೆಕಟ್ಟಿನ ಪ್ರಸ್ತಾಪ ಇಡಲಾಯಿತು. ಕಿಂಡಿಅಣೆಕಟ್ಟಿನ ಅನಿವಾರ್ಯತೆಯನ್ನು ಶಾಸಕರಿಗೆ ತಿಳಿಸಿದಾಗ, ಈ ಪ್ರದೇಶಕ್ಕೊಂದು ರಸ್ತೆ, ಸೇತುವೆ ನಿರ್ಮಿಸಿದರೆ ಬಲೆರಾವು ಪ್ರದೇಶದ ಚಿತ್ರಣವೇ ಬದಲಾದೀತು ಎಂಬ ದೂರದೃಷ್ಟಿಯ ಚಿಂತನೆ ಶಾಸಕರಿಗೆ ಹೊಳೆಯಿತು. ಅಷ್ಟೇ, ಸೇತುವೆ ಸಹಿತ ಕಿಂಡಿಅಣೆಕಟ್ಟನ್ನು ಮಂಜೂರು ಮಾಡಿಯೇ ಬಿಟ್ಟರು. ಇದೀಗ ಸೇತುವೆ ಸಹಿತ ಕಿಂಡಿಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರದಲ್ಲೇ ರಸ್ತೆ ಸಂಪರ್ಕವೂ ಆಗಲಿದ್ದು, ಊರಿನ ಚಿತ್ರಣವನ್ನೇ ಬದಲಾಯಿಸಲಿದೆ.
3 ಕೋಟಿ ರೂ + 1.25 ಕೋಟಿ ರೂ ಅನುದಾನ
ಬಲೆರಾವು ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಸೇತುವೆ ಸಹಿತ ಕಿಂಡಿಅಣೆಕಟ್ಟಿಗೆ ಸಣ್ಣನೀರಾವರಿ ಇಲಾಖೆಯ ವಿಶೇಷ ಅನುದಾನದಿಂದ 3 ಕೋಟಿ ರೂ. ಮಂಜೂರು ಮಾಡಲಾಗಿದೆ. ಇದರಲ್ಲಿ ಸೇತುವೆ ಹಾಗೂ ಕಿಂಡಿಅಣೆಕಟ್ಟು ನಿರ್ಮಾಣಗೊಂಡಿದೆ. ಇನ್ನು 1.20 ಕೋಟಿ ರೂ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆದಿದೆ. ಸೇತುವೆ ಸಹಿತ ಕಿಂಡಿಅಣೆಕಟ್ಟಿಗೆ ಸಂಪರ್ಕಿಸುವ ರಸ್ತೆಯ ಕಾಮಗಾರಿ ಬಾಕಿ ಇದ್ದು, 5 ಲಕ್ಷ ರೂ.ನಲ್ಲಿ ಆ ಕಾಮಗಾರಿಯೂ ಪೂರ್ತಿಗೊಂಡರೆ, ಸೇತುವೆ ಸಂಚಾರಕ್ಕೆ ಮುಕ್ತ.
ತ್ರಿವಳಿ ತಾಲೂಕುಗಳ ಕೊಂಡಿ
ಪುತ್ತೂರು, ಕಡಬ ಹಾಗೂ ಸುಳ್ಯ ಈ ಮೂರು ತಾಲೂಕುಗಳ ಕೊಂಡಿ ಬಲೆರಾವು ಸೇತುವೆ. ಸೇತುವೆಯ ಈ ಭಾಗ ಪುತ್ತೂರು. ಇನ್ನೊಂದು ಬದಿ ಕಡಬ. ಅಂದರೆ ಸುಳ್ಯ ವಿಧಾನಸಭಾ ಕ್ಷೇತ್ರ. ಈ ಮೂರು ತಾಲೂಕುಗಳ ಕೊಂಡಿಯಾಗಿ ಸೇತುವೆ ಸಹಿತ ಕಿಂಡಿಅಣೆಕಟ್ಟು ಕೆಲಸ ಮಾಡಲಿದೆ. ಆದ್ದರಿಂದ ಸೇತುವೆಗೆ ಸಂಪರ್ಕ ರಸ್ತೆಗಾಗಿ ಸಚಿವ, ಶಾಸಕ ಎಸ್. ಅಂಗಾರ ಅವರು ಅನುದಾನ ಇಟ್ಟಿದ್ದು, ಕಾಮಗಾರಿ ನಡೆಯಲಿದೆ.
ಮಹಾಲಿಂಗೇಶ್ವರನ ಅನುಗ್ರಹ
ಬಲೆರಾವು ಪಕ್ಕದಲ್ಲೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನ ಮಾಡುವ ಪ್ರದೇಶವಿದೆ. ಆದ್ದರಿಂದ ಶ್ರೀ ಮಹಾಲಿಂಗೇಶ್ವರ ದೇವರ ಕೃಪಾಕಟಾಕ್ಷ ಈ ಊರಿನ ಮೇಲೆ ಬಿದ್ದಂತಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. 3 ಕೋಟಿ ರೂ. ಅನುದಾನದಲ್ಲಿ ಸೇತುವೆ ಸಹಿತ ಕಿಂಡಿಅಣೆಕಟ್ಟು ನಿರ್ಮಾಣಗೊಂಡಿದೆ. ಸುಮಾರು 1.20 ಕೋಟಿ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣ ಆಗಿದೆ. ಇನ್ನೈದು ಲಕ್ಷ ರೂ.ನ ರಸ್ತೆ ಕಾಮಗಾರಿ ಬಾಕಿ ಇದೆ. ಈ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಬಲೆರಾವು ಪ್ರದೇಶ ಅಭಿವೃದ್ಧಿಗೆ ತೆರೆದುಕೊಳ್ಳಲಿದೆ ಎಂಬ ಕನಸು ಊರಿನವರದ್ದು.
ಏನೆಲ್ಲಾ ಪ್ರಯೋಜನ?
– ಸರ್ವೆ ಪ್ರದೇಶದಲ್ಲಿ ರಸ್ತೆಗೆ ಅಡ್ಡವಾಗಿ ಹರಿಯುವ ಗೌರಿ ಹೊಳೆ ಮಳೆಗಾಲದಲ್ಲಿ ಮುಳುಗುವುದೂ ಇದೆ. ಅಂತಹ ಸಂದರ್ಭ ಸವಣೂರು, ಕಾಣಿಯೂರು, ಸುಬ್ರಹ್ಮಣ್ಯಕ್ಕೆ ತೆರಳುವವರಿಗೆ ಬಲೆರಾವು ಬದಲಿ ರಸ್ತೆಯಾಗಿ ಪ್ರಯೋಜನಕ್ಕೆ ಬರಲಿದೆ.
– ಪುತ್ತೂರಿನಿಂದ ಯಾತ್ರಾ ಸ್ಥಳ ಸುಬ್ರಹ್ಮಣ್ಯಕ್ಕೆ ತೆರಳುವವರು ಕಾಣಿಯೂರು ರಸ್ತೆಯಲ್ಲೇ ಸಾಗುವುದು ಸಾಮಾನ್ಯ. ಮುಂದೆ ಯಾತ್ರಾರ್ಥಿಗಳು ಬಲೆರಾವು ಪ್ರದೇಶದ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸಿಕೊಂಡೇ ಮುಂದೆ ಸಾಗಬಹುದು.
ಕಿಂಡಿಅಣೆಕಟ್ಟಿನಿಂದ ಅಂತರ್ಜಲ ವೃದ್ಧಿ ಆಗುತ್ತದೆ ಎನ್ನುವುದು ನಿಮಗೆಲ್ಲ ತಿಳಿದಿರುವ ಸತ್ಯ. ಬಲೆರಾವು ಪ್ರದೇಶದಲ್ಲಿ ನಿರ್ಮಾಣವಾದ ಕಿಂಡಿಅಣೆಕಟ್ಟಿನಿಂದ ಏನಿಲ್ಲ ಎಂದರೂ, ನದಿ ಪಾತ್ರದ ಹಾಗೂ ಸುತ್ತಮುತ್ತಲಿನ ಸುಮಾರು 15ರಿಂದ 20 ಕಿಲೋ ಮೀಟರ್ ಆಸುಪಾಸಿನ ಕೃಷಿಕರಿಗೆ ಅನುಕೂಲವಾಗಲಿದೆ.
– ಪುತ್ತೂರಿನಿಂದ ಸವಣೂರಿಗೆ ತಲುಪಲು ಒಟ್ಟು 18 ಕಿಲೋ ಮೀಟರ್ ದೂರ. ಆದರೆ ಗಡಿಪ್ಪಿಲದಿಂದ ಎಡಕ್ಕೆ ತಿರುಗಿ, ವೀರಮಂಗಲ ರಸ್ತೆಯಲ್ಲಿ ಸಾಗಿ, ಬಲೆರಾವು ಮೂಲಕ ಸಾಗಿದರೆ ಸುಮಾರು 6 ಕಿಲೋ ಮೀಟರ್ ದೂರದಲ್ಲಿ ಸವಣೂರು ರಸ್ತೆಯ ಪಣೆಮಜಲಿಗೆ ತಲುಪಬಹುದು. ಅಂದರೆ ಪುತ್ತೂರು – ಸವಣೂರು ನಡುವಿನ ಪ್ರಯಾಣದ ಅಂತರ ಇನ್ನೂ ಕಡಿಮೆಯಾಗಲಿದೆ.
– ಅಭಿವೃದ್ಧಿಯಲ್ಲಿ ಮೂಲೆಗುಂಪಾಗಿದ್ದ ಬಲೆರಾವು, ಅಭಿವೃದ್ಧಿ ಕಡೆ ಮುಖ ಮಾಡುವುದು ನಿಶ್ಚಿತ.
ಉತ್ತಮ ಬಳಸು ದಾರಿ
ಕುಗ್ರಾಮವಾಗಿದ್ದ ಬಲೆರಾವು ಪ್ರದೇಶ, ಸೇತುವೆ ಸಹಿತ ಕಿಂಡಿಅಣೆಕಟ್ಟಿನಿಂದ ಅಭಿವೃದ್ಧಿಗೆ ತೆರೆದುಕೊಳ್ಳಲಿದೆ. ಪುತ್ತೂರಿನಿಂದ ಸವಣೂರು, ಸುಬ್ರಹ್ಮಣ್ಯಕ್ಕೆ ತೆರಳುವವರಿಗೆ ಇದು ಬಳಸು ದಾರಿಯೂ ಹೌದು.
–ವಸಂತ್ ರೈ, ಮಹಾಲಿಂಗೇಶ್ವರ ಫಾರ್ಮ್ಸ್, ಪೊಡಿಂಕಲಡ್ಕ