ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ನಾಡು ಘಟಕದ ಮಾಸಿಕ ಸಭೆ ಕುಂಜೂರುಪಂಜ ಶ್ರೀ ಮಂಜುನಾಥ ಸಭಾಭವನದಲ್ಲಿ ನಡೆಯಿತು.
ಯೋಜನೆಯ ಮೇಲ್ವಿಚಾರಕ ಹರೀಶ್ ಕೆ. ಮಾತನಾಡಿ, ಒಗ್ಗಟ್ಟಿನಿಂದ ಮುನ್ನಡೆದರೆ ಸಂಘವನ್ನು, ಘಟಕವನ್ನು ಮಾದರಿಯಾಗಿ ರೂಪಿಸಬಹುದು. ಎಲ್ಲರ ಸಹಕಾರ ಇದ್ದರೆ ತಂಡವನ್ನು ಬಲಪಡಿಸಬಹುದು ಎಂದ ಅವರು, ಶೌರ್ಯ ತಂಡದ ಸದಸ್ಯರು ಗ್ರಾಮಕ್ಕೆ ಸಂಬಂಧಪಟ್ಟ ಬೇರೆ ಬೇರೆ ಸೇವೆಗಳಲ್ಲಿ ಭಾಗವಹಿಸಬಹುದು. ತಿಂಗಳಿಗೆ ಒಂದು ಸೇವೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದರು.
ಜಾತ್ರೋತ್ಸವ ಹಾಗೂ ನೇಮೋತ್ಸವದಲ್ಲಿ ಸೇವೆ ಸಲ್ಲಿಸಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಅವರು, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ತಿಂಗಳ ಪ್ರತಿ 4ನೇ ಮಂಗಳವಾರ ಶ್ರಮದಾನ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಮುಂದಿನ ತಿಂಗಳ ಶ್ರಮದಾನವನ್ನು ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರ ಮತ್ತು ದೈವಸ್ಥಾನದಲ್ಲಿ ಮಾಡುವುದೆಂದು ಸಭೆಗೆ ತಿಳಿಸಲಾಯಿತು.
ಪ್ರತಿನಿಧಿ ವಿನಯ ನಾಯ್ಕ, ಸದಸ್ಯರಾದ ಲೋಕೇಶ್ ನಾಯ್ಕ, ರೋಷನ್ ಡಿಸೋಜ, ಹರಿಪ್ರಸಾದ್, ಸುನೀಲ್, ಸಂಧ್ಯಾ, ಸ್ವಾತಿ, ಅರುಣಾ, ಚಂದ್ರಶೇಖರ, ಶಂಭು, ನವೀನ್ ರೈ, ವಿನೋದ್ ಉಪಸ್ಥಿತರಿದ್ದರು. ಸಂಯೋಜಕಿ ಆಶಾಲತಾ ಸ್ವಾಗತಿಸಿ, ಸದಸ್ಯ ಜಗದೀಶ್ ವಂದಿಸಿದರು.