ಮನೆಯೊಳಗಡೆ ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಏಳು ಮಂದಿ ಗಾಯಗೊಂಡ ಘಟನೆ ಬೆಂಗಳೂರಿನ ಅಂಜನಾಪುರ ಸಮೀಪದ ವೀವರ್ಸ್ ಕಾಲೋನಿಯ ಮಾರುತಿ ಲೇಔಟ್‌ನಲ್ಲಿ ನಡೆದಿದೆ.
ಮಾರ್ಟಿನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಐದು ಮಂದಿ ಬಾಡಿಗೆ ಪಡೆದು ವಾಸವಾಗಿದ್ದರು. ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್ (32), ನಾಜಿಯಾ (22) ಹಾಗೂ ಇರ್ಫಾನ್ (21), ಗುಲಾಬ್ (18), ಶಹಜಾದ್ (9) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬುಧವಾರ ಮುಂಜಾನೆ 5:30ರ ಸುಮಾರಿಗೆ ಅಡುಗೆ ಮನೆಯ ಲೈಟ್ ಸ್ವಿಚ್ ಆನ್ ಮಾಡಿದಾಗ ಸ್ಫೋಟಗೊಂಡಿದೆ. ಅಡುಗೆ ಅನಿಲ ಸೋರಿಕೆಯಾಗಿರುವುದು ತಿಳಿಯದೆ ಲೈಟ್ ಆನ್ ಮಾಡಿದ್ದೆ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯೇ ಧ್ವಂಸವಾಗಿದೆ. ಮನೆಯ ಚಾವಣಿಯ ಹಾರಿ ಹೋಗಿದ್ದು ಕಿಟಕಿ, ಬಾಗಿಲು ಸೇರಿ ಕಾರಿಡರ್‌ನ ಕಂಬಿಯೂ ಛಿದ್ರಗೊಂಡಿದೆ. ಮನೆಯೊಳಗಿನ ವಸ್ತುಗಳು ಛಿದ್ರಗೊಂಡ ತೀವ್ರತೆಗೆ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿಯಾಗಿದೆ. ಪಕ್ಕದ ಮನೆ ನಿವಾಸಿ ಈಶ್ವರಮ್ಮ ಗೂ ಗಂಭೀರ ಗಾಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಣನಕುಂಟೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಿಲಿಂಡರ್ ಸ್ಫೋಟಕ್ಕೆ ಪಕ್ಕದ ಮನೆ ನಿವಾಸಿ ಈಶ್ವರಮ್ಮ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.