ಪುತ್ತೂರು: ಸಂಸಾರ ಜೋಡುಮಾರ್ಗ ಆಶ್ರಯದಲ್ಲಿ ರೋಟರಿ ಪುತ್ತೂರು ಎಲೈಟ್ ಸಹಭಾಗಿತ್ವದಲ್ಲಿ ನಿರತ ನಿರಂತ – ಬಹುವಚನಂ ಆಯೋಜನೆಯ ಮೂರು ದಿನಗಳ “ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ” ನ. 22ರಿಂದ 24ರವರೆಗೆ ಪುತ್ತೂರು ಮಂಜಲ್ಪಡ್ಪು ಸುದಾನ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಎಡ್ವರ್ಡ್ ಹಾಲ್ ನಲ್ಲಿ ನಡೆಯಲಿದೆ.
ಮೂರು ದಿನಗಳ ಕಾಲ ಐದು ಮಕ್ಕಳ ನಾಟಕಗಳನ್ನು ಆಯೋಜಿಸಲಾಗಿದ್ದು, ಪ್ರತಿದಿನ ಸಂಜೆ 6.30ಕ್ಕೆ ನಾಟಕ ಆರಂಭಗೊಳ್ಳಲಿದೆ. ನ. 22ರ ಬುಧವಾರ ಸಂಜೆ 6.30ರಿಂದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಪೆರಾಜೆ ಇಲ್ಲಿಯ ವಿದ್ಯಾರ್ಥಿಗಳು ಅಭಿನಯಿಸುವ, ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ ನಿರ್ದೇಶನದ “ಆರೋಗ್ಯ ಸಿರಿ” ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 7.15ರಿಂದ ಪುತ್ತೂರು ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳಿಂದ ಮೌನೇಶ ವಿಶ್ವಕರ್ಮ ನಿರ್ದೇಶನದ “ರೋಗಗಳ ಮಾಯದಾಟ” ನಾಟಕ ಪ್ರದರ್ಶನಗೊಳ್ಳಲಿದೆ.
ನ. 23ರ ಗುರುವಾರ ಸಂಜೆ 6.30ರಿಂದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಅಭಿಜ್ಞಾನ ಮಕ್ಕಳ ನಾಟಕ ಬಳಗದಿಂದ ರಂಗಕರ್ಮಿ ಐ.ಕೆ. ಬೊಳುವಾರು ನಿರ್ದೇಶನದಲ್ಲಿ “ಕಾರಂತಜ್ಜನಿಗೊಂದು ಪತ್ರ” ನಾಟಕ ಪ್ರದರ್ಶನವಾಗಲಿದೆ. ಬಳಿಕ 7.30ರಿಂದ ರೋಟರಿ ಪುತ್ತೂರು ಎಲೈಟ್ ಇದರ ಸದಸ್ಯರು ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ ನಿರ್ದೇಶನದಲ್ಲಿ ಅಭಿನಯಿಸುವ ನಾಟಕ “ಅಯ್ಯೊಯ್ಯೋ ಮಾನವ..!” ಪ್ರದರ್ಶನವಾಗಲಿದೆ.
ನ. 24 ಶುಕ್ರವಾರ ಸಂಜೆ 6.30ರಿಂದ ಸಾಗರ ತುಮರಿಯ ಕಿನ್ನರ ಮೇಳದ ಕಲಾವಿದರು ರಂಗ ನಿರ್ದೇಶಕ ಸಾಲಿಯಾನ್ ಉಮೇಶ್ ನಾರಾಯಣ್ ನಿರ್ದೇಶನದಲ್ಲಿ ಅಭಿನಯಿಸುವ ನಾಟಕ “ಆನ್ಯಾಳ ಡೈರಿ” ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.