ಚಿರತೆಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದ್ದು, ಪೊಲೀಸರು ಚಿರತೆಯ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.
ಶಂಕಿತ ಆರೋಪಿಗಳಾದ ಚಾಮರಾಜನಗರದ ಶಾಂತರಾಜು ಮತ್ತು ಅರ್ಜುನ್ ಎಂಬುವವರಿಂದ ಎರಡು ಕಂಟ್ರಿ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೊಲೀಸ್ ತಂಡವು ಆರೋಪಿಗಳನ್ನು ಬಂಧಿಸಿದೆ.
ಖಚಿತ ಮಾಹಿತಿ ಮೇರೆಗೆ ಚಿಕ್ಕಲ್ಲೂರು ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಅವರನ್ನು ಬಂಧಿಸಲಾಗಿದೆ. ಈ ವೇಳೆ ಪರಿಶೀಲಿಸಿದಾಗ ಅವರ ಬಳಿ ಎರಡು ದೇಶೀ ನಿರ್ಮಿತ ಪಿಸ್ತೂಲ್‌ಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ನಾಲ್ಕೈದು ದಿನಗಳ ಹಿಂದೆ ಚಿರತೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ನಟರಾಜ್ ಎಂದು ಗುರುತಿಸಲಾಗಿರುವ ಮೂರನೇ ಸಹಚರನ ಕೈವಾಡವನ್ನು ಬಹಿರಂಗಪಡಿಸಿದ್ದಾರೆ ಎಂದು ಅವರು ಹೇಳಿದರು.
‘ಕಾವೇರಿಪುರದ ಕಗ್ಗಲಿಪುರ ಅರಣ್ಯ ಪ್ರದೇಶದಲ್ಲಿ ಮೂವರು ಸೇರಿ ಚಿರತೆಯನ್ನು ಕೊಂದಿದ್ದಾರೆ ಮತ್ತು ಅದರ ಚರ್ಮವನ್ನು ತೆಗೆಯುತ್ತಿರುವಾಗ ಯಾರೋ ತಮ್ಮ ಕಡೆಗೆ ಬರುವ ಶಬ್ದ ಕೇಳಿ ಚಿರತೆಯ ಶವವನ್ನು ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದಾರೆ’ ಎಂದು ಅವರು ಹೇಳಿದರು. ನಂತರ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಗ್ಗಲಿಪುರ ಅರಣ್ಯ ಪ್ರದೇಶದಿಂದ ಪೊಲೀಸರು ಚಿರತೆಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.